ಒಂದು ಕಾಲದ ಮಾದಕ ನಟಿ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರ
ಪ್ರಯಾಗ್‌ರಾಜ್ : ಬಾಲಿವುಡ್‌ನ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತದ್ದಾರೆ. ಶುಕ್ರವಾರ ಕುಂಭಮೇಳದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರು ನೀಡಲಾಗಿದೆ. ಇದರೊಂದಿಗೆ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷೇಕವನ್ನೂ ಮಾಡಲಾಗಿದೆ.
25 ವರ್ಷಗಳಿಂದ ವಿದೇಶದಲ್ಲಿ ಇದ್ದ ಮಮತಾ ಕುಲಕರ್ಣಿ ಶುಕ್ರವಾರ ಮಹಾಕುಂಭಮೇಳಕ್ಕೆ ಬಂದು ಪುಣ್ಯಸ್ನಾನ ಮಾಡಿದ ಬಳಿಕ ಕಿನ್ನರ ಅಖಾಡಕ್ಕೆ ತೆರಳಿ ಸನ್ಯಾಸ ದೀಕ್ಷೆ ಪಡೆದರು. ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಡಾ. ಲಕ್ಷ್ಮಿನಾರಾಯಣ್ ತ್ರಿಪಾಠಿ ಮಹಾರಾಜ್ ಮತ್ತು ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಜೈ ಅಂಬಾನಂದ್ ಗಿರಿ ನೇತೃತ್ವದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಕಿನ್ನರ ಅಖಾಡಕ್ಕೆ ಸೇರಿಸಿಕೊಳ್ಳುವ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆ ಪ್ರಕಾರ ನಟಿ ಸ್ವಪಿಂಡ ದಾನ ಮಾಡಿದ ಬಳಿಕ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರಿನಲ್ಲಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದರು.
ಕಿನ್ನರ ಅಖಾಡ ಮಮತಾ ಕುಲಕರ್ಣಿಯನ್ನು ಮಹಾಮಂಡಲೇಶ್ವರರನ್ನಾಗಿ ಮಾಡಿದ್ದು, ಅವರನ್ನು ಮಾಯಿ ಮಾತಾ ನಂದಗಿರಿ ಎಂಬ ಹೊಸ ಹೆಸರಿನಲ್ಲಿ ಗುರುತಿಸಲಾಗುವುದು. ಕಳೆದ ಒಂದೂವರೆ ವರ್ಷಗಳಿಂದ ಅವರು ಕಿನ್ನರ ಅಖಾಡದೊಂದಿಗೆ ಸಂಪರ್ಕದಲ್ಲಿದ್ದಾರೆ. ಆಕೆ ಬಯಸಿದರೆ ಯಾವುದೇ ಭಕ್ತಿ ಪಾತ್ರದ ಪಾತ್ರವನ್ನು ನಿರ್ವಹಿಸಲು ಅವಳಿಗೆ ಅವಕಾಶವಿದೆ. ಏಕೆಂದರೆ ನಾವು ಯಾರನ್ನೂ ಅವರ ಪಾತ್ರಗಳನ್ನು ನಿರ್ವಹಿಸುವುದನ್ನು ತಡೆಯುವುದಿಲ್ಲ ಎಂದು ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಡಾ. ಲಕ್ಷ್ಮಿನಾರಾಯಣ್ ತ್ರಿಪಾಠಿ ಮಹಾರಾಜ್ ಹೇಳಿದ್ದಾರೆ.ಕಿನ್ನರ ಅಖಾಡವನ್ನು 2018ರಲ್ಲಿ ಸ್ಥಾಪಿಸಲಾಗಿದ್ದು, ಇದು ತೃತೀಯ ಲಿಂಗಿಗಳ ಅಖಾಡ. ಜುನಾ ಅಖಾಡದ ಅಧೀನದಲ್ಲಿ ಇದು ಇದೆ. 90ರ ದಶಕದಲ್ಲಿ ತನ್ನ ಮಾದಕತೆಯಿಂದಲೇ ಮಮತಾ ಕುಲಕರ್ಣಿ ಬಾಲಿವುಡ್‌ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಸಂಜಯ್ ದತ್, ಸಲ್ಮಾನ್ ಖಾನ್ ಅವರಂಥ ಹೀರೊಗಳ ಜತೆ ನಾಯಕಿಯಾಗಿ ಅಭಿನಯಿಸಿದ್ದರು. ಸುಮಾರು 40 ಚಿತ್ರಗಳಲ್ಲಿ ಅವರು ನಾಯಕಿಯಾಗಿದ್ದರು. ಸಿನೆಮಾದಿಂದ ದೂರವಾದ ಬಳಿಕ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಒಬ್ಬನನ್ನು ಅವರು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದರು. ಅವರ ಮೇಲೆ 2000 ಕೋ. ರೂ. ಡ್ರಗ್ ಕೇಸ್ ಕೂಡ ಇತ್ತು. ಆದರೆ ತಾನು 25 ವರ್ಷದ ಹಿಂದೆಯೇ ಅಧ್ಯಾತ್ಮದತ್ತ ಆಕರ್ಷಿತಳಾಗಿದ್ದೆ. ಸನ್ಯಾಸವನ್ನೂ ಸ್ವೀಕರಿಸಿದ್ದೆ. ಈಗ ಕುಂಭಮೇಳದಲ್ಲಿ ಪೂರ್ಣ ಪ್ರಮಾಣದ ಸನ್ಯಾಸಿ ಆಗಿ ಬದಲಾಗಿದ್ದೇನೆ ಮತ್ತು ಸನಾತನ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಪಡೆದಿದ್ದೇನೆ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ. ಮರಳಿ ಬಾಲಿವುಡ್‌ಗೆ ಹೋಗುವ ಪ್ರಶ್ನೆಯೇ ಇಲ್ಲ, ಕೈಲ್ಲಿ 30 ಚಿತ್ರ ಇರುವಾಗಲೇ ಎಲ್ಲವನ್ನೂ ಬಿಟ್ಟು ಅಧ್ಯಾತ್ಮದತ್ತ ಹೋಗಿದ್ದೆ ಎಂದವರು ಹೇಳಿದ್ದಾರೆ.