ಹಲವಾರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ-ಹೆಂಡತಿ
ಹೊಸದಿಲ್ಲಿ: ಭಾರತದ ಮಾಜಿ ಡ್ಯಾಶಿಂಗ್ ಓಪನರ್ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸೆಹವಾಗ್ ಅಭಿಮಾನಿಗಳನ್ನು ವಿಚಲಿತಗೊಳಿಸಿದೆ. ಸೆಹವಾಗ್ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಸೆಹ್ವಾಗ್ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಸೆಹ್ವಾಗ್ ಅವರ ಇತ್ತೀಚಿನ ದೀಪಾವಳಿ ಆಚರಣೆಯ ಫೋಟೊ ಅಪ್ಲೋಡ್ ಮಾಡಿದ್ದರು. ಇದರಲ್ಲಿ ತಾಯಿ, ಮಕ್ಕಳು ಇದ್ದರೆ ಪತ್ನಿಯ ಫೋಟೋ ಇರಲಿಲ್ಲ.
ಕೆಲವು ವಾರಗಳ ಹಿಂದೆ ಸೆಹ್ವಾಗ್ ಕೇರಳದ ಪಾಲಕ್ಕಾಡ್‌ನಲ್ಲಿರುವ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆಯೂ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಆದರೆ ವಿಚ್ಚೇದನ ಕುರಿತು ಇಲ್ಲಿಯವರೆಗೆ ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ಸೆಹ್ವಾಗ್ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. 2000ನೇ ಇಸ್ವಿಯಲ್ಲಿ ಆರಂಭಗೊಂಡ ಪ್ರೀತಿಗೆ 2004ರಲ್ಲಿ ವಿವಾಹದ ಮುದ್ರೆ ಒತ್ತಿದ್ದರು. ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಇಬ್ಬರು ವಿವಾಹವಾಗಿದ್ದರು.
ಸೆಹ್ವಾಗ್ 2015ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ ನಂತರ ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದರ ಜೊತೆ ವಾಹಿನಿಗಳಲ್ಲಿ ಕ್ರಿಕೆಟ್ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.