ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌

ಇದು ನಿರೀಕ್ಷಿತ ತನಿಖಾ ವರದಿ ಎಂದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಯವರಿಗೆ ಕ್ಲೀನ್‌ಚಿಟ್‌ ನೀಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಮುಡಾ ಆಯುಕ್ತರು, ರೆವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೇನು ಮಾಡಬೇಕೆಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎನ್ನಲಾಗಿದೆ. ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕೋರ್ಟ್​ಗೆ ಸಲ್ಲಿಕೆ ಮಾಡಲಿದ್ದಾರೆ. ಲೋಕಾಯುಕ್ತ ಎಸ್​​ಪಿ ಟಿ.ಜೆ ಉದೇಶ್ ನೇತೃತ್ವದಲ್ಲಿ ತನಿಖೆ ನಡೆದು ವರದಿ ಸಿದ್ಧಪಡಿಸಲಾಗಿದೆ.































 
 

ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್​ಚಿಟ್ ನೀಡಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ, ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಕ್ರಮ ಎಸಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್​ಚಿಟ್‌ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ. ಅದಾಗ್ಯೂ ಅದು ನಿರೀಕ್ಷಿತ. ಇದರಿಂದ ನನ್ನ ಹೋರಾಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಸಿಎಂ ಪ್ರಭಾವ ಇಲ್ಲದೆ ಅಧಿಕಾರಿಗಳು ಅಪರಾಧವೆಸಗಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಡಾ ಹಗರಣ ಸಂಬಂಧ ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ತನಿಖೆಯೂ ಪ್ರಗತಿಯಲ್ಲಿದೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯೂ ಕರ್ನಾಟಕ ಹೈಕೋರ್ಟ್​​ನಲ್ಲಿ ನಡೆಯುತ್ತಿದೆ. ಜನವರಿ 27ರಂದು ಸಿಬಿಐ ತನಿಖೆ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಲೋಕಾಯುಕ್ತ ಅಧಿಕಾರಿಗಳು ತನಿಖಾ ವರದಿಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡಲಿದ್ದಾರೆ. ಹೀಗಾಗಿ ಪ್ರಕರಣದ ಕುರಿತ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top