ಬೆಂಕಿ ಹತ್ತಿಕೊಂಡ ವದಂತಿ ನಂಬಿ ಹಳಿಗೆ ಹಾರಿದವರ ಮೇಲೆ ಹರಿದ ಇನ್ನೊಂದು ರೈಲು
ಮುಂಬಯಿ: ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ರೈಲ್ವೆ ವಿಭಾಗೀಯ ಆಯುಕ್ತ ಪ್ರವೀಣ್ ಗೆದಮ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ದಾಟುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಪ್ರಯಾಣಿಕರು ಇಳಿದು ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಟ್ರ್ಯಾಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರ ಮೇಲೆ ಹರಿದಿದೆ. ಪರಿಣಾಮವಾಗಿ 11 ಮಂದಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ 11 ಮಂದಿ ಸಾವಿಗೀಡಾಗಿದ್ದು, 5 ಜನರು ಗಾಯಗೊಂಡಿದ್ದಾರೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಒಂದು ಬೋಗಿಯೊಳಗೆ ‘ಹಾಟ್ ಆಕ್ಸಲ್’ ಅಥವಾ ‘ಬ್ರೇಕ್-ಬೈಂಡಿಂಗ್’ (ಜಾಮಿಂಗ್)ನಿಂದಾಗಿ ಕಿಡಿ ಹೊತ್ತಿರುವುದು ಕಂಡುಬಂದಿದೆ. ಇದರಿಂದ ಕೆಲವು ಪ್ರಯಾಣಿಕರು ಭಯಭೀತರಾಗಿ ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಕೆಲವರು ಹಳಿಗಳ ಮೇಲೆ ಹಾರಿದ್ದಾರೆ. ಅದೇ ಸಮಯದಲ್ಲಿ, ಕರ್ನಾಟಕ ಎಕ್ಸ್‌ಪ್ರೆಸ್ ಪಕ್ಕದ ಹಳಿಯಲ್ಲಿ ಹಾದುಹೋಗುತ್ತಿತ್ತು. ಆಗ ಅವಘಡ ಸಂಭವಿಸಿದೆ.
ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ಪಡೆದುಕೊಂಡಿದ್ದಾರೆ. ಜಲಗಾಂವ್ ಜಿಲ್ಲೆಯ ಪರ್ಧಡೆ ರೈಲು ನಿಲ್ದಾಣದ ಬಳಿ ನಿನ್ನೆ ಸಂಜೆ ಸಂಭವಿಸಿದ ಅಪಘಾತದ ಬಗ್ಗೆ ಆಡಳಿತದಿಂದ ನನಗೆ ಮಾಹಿತಿ ಬಂದಿದೆ. ಬೆಂಕಿಯ ವದಂತಿಯಿಂದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಪಕ್ಕದ ಹಳಿಗೆ ಹಾರಿದಾಗ ಅಪಘಾತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ಮತ್ತು ಅವರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ನೀಡಲು ಸಂಬಂಧಪಟ್ಟ ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.