ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲಿ ನಡೆದ ಘಟನೆ ಭಾರಿ ವೈರಲ್
ಮಂಗಳೂರು: ವಿಟ್ಲದ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ನಿಯಂತ್ರಣ ತಪ್ಪಿದ ಡ್ರೋನ್ ರಥದ ಮೇಲಿದ್ದ ದೇವರ ಪ್ರಭವಳಿಗೆ ಬಡಿದಿದ್ದು, ಈ ಘಟನೆ ಇಲ್ಲಿನ ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಜ.21ರಂದು ಕ್ಷೇತ್ರದ ವರ್ಷಾವಧಿ ಉತ್ಸವದ ನಿಮಿತ್ತ ರಥೋತ್ಸವ ನೆರವೇರಿದ್ದು, ಈ ಸಂದರ್ಭದಲ್ಲಿ ಈ ಅಚಾತುರ್ಯ ಸಂಭವಿಸಿದೆ. ಬ್ರಹ್ಮವಾಹಕರು ದೇವರನ್ನು ಹೊತ್ತುಕೊಂಡು ರಥವೇರಿ ಒಳ ಪ್ರವೇಶಿಸುವ ಮೊದಲೊಮ್ಮೆ ಭಕ್ತರತ್ತ ತಿರುಗಿದ ಸಂದರ್ಭದಲ್ಲೇ ಹಾರಿಕೊಂಡು ಬಂದ ಡ್ರೋನ್ ದೇವರ ಪ್ರಭಾವಳಿಯ ಅಟ್ಟೆಗೆ ಬಡಿದಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸಹಾಯಕ ಅರ್ಚಕರಿಗೆ ಡ್ರೋನ್ ರೆಕ್ಕೆ ತಾಗಿ ತಲೆಗೆ ಗಾಯವಾಗಿದೆ. ಅರ್ಚಕರು ಕೂಡಲೇ ಡ್ರೋನನ್ನು ಸಿಟ್ಟಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ನಂತರ ರಥೋತ್ಸವ ಸಾಂಗವಾಗಿ ನಡೆದಿದ್ದರೂ ಎಲ್ಲೂ ನಡೆಯದ ಈ ವಿಚಿತ್ರ ಘಟನೆ ಇಲ್ಲಿ ನಡೆದಿರುವುದು ಕೆಡುಕಿನ ಮುನ್ಸೂಚನೆಯಾ ಎಂಬ ಅನುಮಾನ ಭಕ್ತರನ್ನು ಕಾಡುತ್ತಿದೆ.
ಈ ಕ್ಷೇತ್ರದಲ್ಲಿ ಹಿಂದೆಯೂ ಇಂಥ ಸಣ್ಣಪುಟ್ಟ ಅವಘಡಗಳು ಸಂಭವಿಸಿದ್ದವು. ಆದರೆ ಆಡಳಿತ ಮಂಡಳಿ ಅವುಗಳ ಬಗ್ಗೆ ತಲೆಕೆಡಿಸಕೊಳ್ಳದೆ ಮಾಮೂಲಿಯಂತೆ ವಾರ್ಷಿಕ ಉತ್ಸವ ನಡೆಸಿದೆ. ಆದರೆ ಡ್ರೋನ್ ದೇವರ ಪ್ರಭಾವಳಿಗೆ ಬಡಿದ ಬಳಿಕ ಏನೋ ಆಪತ್ತು ಕಾದಿದೆ ಎಂದು ಆತಂಕ ಜನರನ್ನು ಕಾಡಲಾರಂಭಿಸಿದೆ. ದೇವರ ಪ್ರಭಾವಳಿಗೆ ಡ್ರೋನ್ ಬಂದು ಬಡಿಯುವ ದೃಶ್ಯದ ವೀಡಿಯೊ ತುಣುಕು ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.