ಪುತ್ತೂರು : ಬೊಳುವಾರಿನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಜ.24 ರಂದು 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕ್ಷೇತ್ರದ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2016 ರಿಂದ ನಮ್ಮ ದೇವಸ್ಥಾನದ ಜೊತೆಯಾಗಿ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನವನ್ನು ಪ್ರಾರಂಭ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಚೆಂಡೆ, ಮದ್ದಳೆ, ಭಾಗವತಿಕೆ, ನೃತ್ಯ ತರಬೇತಿಯನ್ನು ಕೊಡುತ್ತಾ ಬರುತ್ತಿದ್ದು, ಯಕ್ಷಗಾನವನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಕೆಲಸ ಮಾಡುತ್ತಾ ಬರುತ್ತಿದೆ. ಹಿಮ್ಮೇಳ, ಮುಮ್ಮೇಳ ತರಬೇತಿಯನ್ನು ಕೊಡುವಂತಹ ಸಂಘ ಬೇರೆಲ್ಲಿಯೂ ಇಲ್ಲ. ಈ ವ್ಯವಸ್ಥೆ ನಮ್ಮಲ್ಲಿ ಮಾತ್ರ ಇದೆ ಎಂದು ಹೇಳಿದರು.
ಕ್ಷೇತ್ರದಲ್ಲಿ 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ ನಡೆಯಲಿದ್ದು, ಬೆಳಿಗ್ಗೆ ಗಣಪತಿ ಹೋಮ, ತಂಬಿಲ ಸೇವೆಗಳು, ಸಾಮೂಹಿಕ ದುರ್ಗಾಪೂಜೆ, ಚಂಡಿಕಾ ಯಾಗ, ರಾತ್ರಿ ಸಾಮೂಹಿಕ ರಂಗಪೂಜೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 3ರಿಂದ ಭಕ್ತಿ ಭಾವ ಗಾನ ಸಂಭ್ರಮ ನಡೆಯಲಿದೆ. ಸಂಜೆ ಗಂಟೆ 5 ರಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6.30ರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8 ರಿಂದ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದ ಯಕ್ಷಗಾನ ತರಬೇತಿಯ ಶಿಷ್ಯ ವರ್ಗ ಹಾಗು ಹಿರಿಯ ಸದಸ್ಯರಿಂದ ‘ದಕ್ಷಯಜ್ಞ- ವೀರವರ್ಮ ಕಾಳಗ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಬಾಲಸುಬ್ರಹ್ಮಣ್ಯ ಭಟ್ ಹೇಳಿದರು.
ಪ್ರತಿಷ್ಠಾನದ ಮೂಲಕ ಸುಮಾರು 70 ಮಂದಿ ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ ಎಂದು ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶಂಕರ್ ಭಟ್ ಉಪಸ್ಥಿತರಿದ್ದರು.