ಸಿಎಂ ಕ್ಷೇತ್ರವಾದರೂ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಬ್ಯಾನರ್ ಹಾಕಿದ ಗ್ರಾಮಸ್ಥರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಧಾನಸಭೆ ಕ್ಷೇತ್ರವಾದ ವರುಣಾದಲ್ಲೇ ಜನರು ಕಾಂಗ್ರೆಸ್ ನಾಯಕರಿಗೆ ಬಹಿಷ್ಕಾರ ಹಾಕಿದ ಬೆಳವಣಿಗೆಯೊಂದು ನಿನ್ನೆ ನಡೆದಿದೆ. ವರುಣಾದ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿಷೇಧ ಹೇರಲಾಗಿದೆ ಎಂಬ ಫ್ಲೆಕ್ಸ್‌ಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದೆ, ಅಭಿವೃದ್ಧಿಯಾಗದಿರುವುದರಿಂದ ಬೇಸತ್ತ ಜನರು ಕಾಂಗ್ರೆಸ್ ಮೇಲೆ ಆಕ್ರೋಶಗೊಂಡು ಬ್ಯಾನರ್‌ಗಳನ್ನು ಹಾಕಿದ್ದರು. ಕಾಂಗ್ರೆಸ್ ಮುಖಂಡರಿಗೆ ನಮ್ಮ ಗ್ರಾಮದ ಒಳಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಬ್ಯಾನರ್‌ಗಳು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಳಿಕ ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯ ತವರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗುವುದು ಸಹಜ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಸರಕಾರ ಬಂದು ಎರಡು ವರ್ಷವಾಗಿದ್ದರೂ ಯಾವ ಅಭಿವೃದ್ಧಿ ಕಾರ್ಯವೂ ಆಗದ ಹಿನ್ನೆಲೆಯಲ್ಲಿ ಜನರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಗರ್ಲೆ ಗ್ರಾಮದ ಜನರು ಕಾಂಗ್ರೆಸ್ ಮುಖಂಡರಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ನಾಲ್ಕು ಕಡೆ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ನಲ್ಲಿ ಕಾಂಗ್ರೆಸ್ ಮುಖಂಡರನ್ನು ಗ್ರಾಮದ ಒಳಗೆ ನಿಷೇಧಿಸಲಾಗಿದೆ ಎಂದು ಬರೆಯಲಾಗಿತ್ತು.
ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು (ನಾಮರ್ದರು), ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನು ಗ್ರಾಮಕ್ಕೆ ನಿಷೇಧಿಸಲಾಗಿದೆ ಎಂದು ಫ್ಲೆಕ್ಸ್ ಹಾಕಿದ್ದಾರೆ.