ಪುತ್ತೂರು : ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಯಶಸ್ವಿಯಾಗಿ ನೆರವೇರಿದ್ದು ಹಗಲಿರುಲೆನ್ನದೆ ದುಡಿದ ದೇವದುರ್ಲಭ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ‘ಧನ್ಯೋಸ್ಮಿ’ ಕೋಟೆಚಾ ಹಾಲ್ ನಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷದ ಸಂಭ್ರಮಕ್ಕೆ ನೂರು ಜೋಡಿಗೆ ಸಾಮೂಹಿಕ ವಿವಾಹ ನೆರವೇರಿಸಲು 2025ರ ಡಿಸೆಂಬರ್ ನಲ್ಲಿ ಮೂರು ದಿನಗಳ ಬೃಹತ್ ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಘೋಷಣೆ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ಶ್ರೀನಿವಾಸ ಕಲ್ಯಾಣೋತ್ಸವ ಸ್ವಾಗತ ಸಮಿತಿ ಸಂಚಾಲಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಬಹಳ ಚೆನ್ನಾಗಿ ಯಶಸ್ವಿಯಾಗಿದ್ದು, ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಹಿಂದೂ ಸಮಾಜವನ್ನು ಒಂದು ಮಾಡಿ ಯಶಸ್ವಿ ಕಾರ್ಯಕ್ರಮ ಮಾಡಲು ಕಾರ್ಯಕರ್ತರ ನಾಯಕ ಅರುಣ್ ಕುಮಾರ್ ಪುತ್ತಿಲ ಅವರ ಸಂಘಟನಾ ಕೌಶಲ್ಯವೇ ಕಾರಣ. ಕಾರ್ಯಕ್ರಮದಲ್ಲಿ ವ್ಯವಸ್ಥೆ, ಅನ್ನದಾನ, ಶೋಭಾಯಾತ್ರೆ , ಲೆಕ್ಕಾಚಾರ ಎಲ್ಲವೂ ಯಾವೂದೇ ನ್ಯೂನತೆಯಿಲ್ಲದೆ ಯಶಸ್ವಿಯಾಗಿ ನೆರವೇರಿದೆ ಎಂದರು.
ಗೌರವಾಧ್ಯಕ್ಷ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿ, ಈ ವರ್ಷದ ಡಿಸೆಂಬರ್ ನಲ್ಲಿ ಜರಗುವ ಸಾಮೂಹಿಕ ವಿವಾಹಕ್ಕೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಚ್ಚುಕಟ್ಟಾಗಿ ನೆರವೇರಿದ ಶ್ರೀನಿವಾಸ ಕಲ್ಯಾಣೋತ್ಸವದ ಯಶಸ್ವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷದ ಸಂಭ್ರಮದಲ್ಲಿ ಡಿಸೆಂಬರ್ ನಲ್ಲಿ 100 ಜೋಡಿಗೆ ಸಾಮೂಹಿಕ ವಿವಾಹ ಸಹಿತ ಮೂರು ದಿನಗಳ ಬೃಹತ್ ಕಾರ್ಯಕ್ರಮ ನೆರವೇರಿಸಲಾಗುವುದು ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ತುಳಸಿ ಕ್ಯಾಟರಿಂಗ್ ನ ಹರೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಉದಯಕುಮಾರ್ ರೈ ಸಂಪ್ಯ ಲೆಕ್ಕಪತ್ರ ಮಂಡಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ರಾಜೇಶ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಸಹಸಂಚಾಲಕ ಮನೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿಮಠ ಕಾರ್ಯಕ್ರಮ ನಿರೂಪಿಸಿದರು.