ಪುತ್ತೂರು : ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿಗೆ ಜ.25 ಶನಿವಾರ ಚುನಾವಣೆ ನಡೆಯಲಿದ್ದು, ಕಳೆದ 20 ವರ್ಷಗಳಿಂದ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡ ನನಗೆ ಈ ಬಾರಿ ಸಹಕಾರ ಭಾರತಿಯಿಂದ ಅವಕಾಶ ವಂಚಿತನಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಮತದಾರರು ನನ್ನನ್ನು ಗೆಲ್ಲಿಸಬೇಕಾಗಿ ಪಕ್ಷೇತರ ಅಭ್ಯರ್ಥಿ ಸದಾಶಿವ ಪೈ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೆಲವೊಂದು ಆಂತರಿಕ ಕಾರಣ ಸಹಿತ ಅವಕಾಶವಾದಿಗಳ ಕಾರಣದಿಂದ ನನಗೆ ಈ ಬಾರಿ ಅವಕಾಶ ನೀಡಿಲ್ಲ ಎಂಬುದು ಗೊತ್ತಾಗಿದ್ದು, ನಾನು ಬಿಜೆಪಿಗೆ ವಿರುದ್ಧವಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿಲ್ಲ. ಒಂದು ವೇಳೆ ನಾನು ಗೆದ್ದರೆ ಸಹಕಾರಿ ಭಾರತಿಗೆ ಬೆಂಬಲನಾಗಿಯೇ ಇರುತ್ತೇನೆ. ಜನಸಂಘದ ಕಾಲದಿಂದಲೂ ನಾನು ಬಿಜೆಪಿ ಜತೆ ಒಡನಾಟ ಹೊಂದಿದವ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭವೂ ನಾನು ಕಾರ್ಯಕರ್ತನಾಗಿ ಬಿಜೆಪಿ ಪಕ್ಷದಲ್ಲಿ ದುಡಿದಿದ್ದೇನೆ ಎಂದು ಅವರು ತಿಳಿಸಿದರು.
ಈ ಬಾರಿ ಅವಕಾಶ ಇಲ್ಲಾ. ಹಳೆಯ ನಾಲ್ಕು ಮಂದಿಯನ್ನು ಬಿಟ್ಟು ಉಳಿದ ಅಭ್ಯರ್ಥಿಗಳು ಹೊಸಮುಖ ಎಂದು ತಿಳಿಸಿದಾಗ ಈ ವಿಷಯವನ್ನು ನಾನು ಮೊದಲೇ ತಿಳಿದಿದ್ದೆ. ಈ ನಿಟ್ಟಿನಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸಲು ತಯಾರಾಗಿದ್ದೆ. ಕೆಲವೊಂದು ಅವಕಾಶವಾದಿಗಳ ಷಡ್ಯಂತರದಿಂದ ಕೈತಪ್ಪಿದೆ ಎಂದ ಅವರು, ಸಮಾನತೆ ಎಲ್ಲರಿಗೂ ಬೇಕು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಬಾರದು. ಬಿಜೆಪಿ ಪಕ್ಷಕ್ಕೆ ಬಂಡಾಯವಾಗಿ ನಾನು ಸ್ಪರ್ಧಿಸಿಲ್ಲ. ಅಲ್ಲದೆ ಯಾರ ಮಾತನ್ನೂ ಕೇಳಿ ಸ್ಪರ್ಧಿಸಿಲ್ಲ. ಒಂದು ವೇಳೆ ಇನ್ನೊಬ್ಬರ ಮಾತು ಕೇಳಿ ನಾನು ಸ್ಪರ್ಧಿಸಿದ್ದೇ ಆದರೆ ಇತರರಿಗೆ ಅಪವಾದ ಬರುತ್ತದೆ ಎಂಬುದು ನನ್ನ ಅಭಿಪ್ರಾಯ. ನನ್ನ ಸ್ವಂತ ನಿರ್ಧಾರದಿಂದ ಸ್ಪರ್ಧಿಸಿದ್ದೇನೆ. ಮತದಾರರೇ ನನಗೆ ಬೆಂಬಲವಾಗಿ ನಿಂತು ನನ್ನನ್ನು ಈ ಬಾರಿ ಚುನಾಯಿಸಬೇಕು ಎಂದು ಅವರು ವಿನಂತಿಸಿದರು.