ಸ್ಥಳೀಯರು ನೆರವಾಗಿರುವ ಅನುಮಾನ
ಮಂಗಳೂರು : ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಯ ಸೂತ್ರಧಾರ ಮುರುಗಂಡಿ ಥೇವರ್ ಎರಡು ತಿಂಗಳ ಹಿಂದೆ ಮಂಗಳೂರಿಗೆ ಬಂದು ತಲಪಾಡಿ ಸಮೀಪ ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರು ಸಹಕಾರಿ ಬ್ಯಾಂಕಿನ ಪರಿಸರವನ್ನು ಅಧ್ಯಯನ ಮಾಡಿ ಹೋಗಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಕೋಟೆಕಾರು ಪರಿಸರದಲ್ಲಿ ಓಡಾಡಿ ಎಲ್ಲ ವಿಚಾರ ತಿಳಿದುಕೊಂಡು ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದರೋಡೆಗೆ ಸ್ಥಳೀಯರು ನೆರವಾಗಿದ್ದಾರೆ ಎಂಬ ಅನುಮಾನವನ್ನು ಈ ಮಾಹಿತಿ ದೃಢಪಡಿಸುತ್ತದೆ.
ಪಕ್ಕಾ ಪ್ಲಾನ್ ಮಾಡಿ ಈ ದರೋಡೆ ಕೃತ್ಯ ಎಸಗಲಾಗಿತ್ತು. ಕೆಲವೇ ನಿಮಿಷಗಳಲ್ಲಿ ದರೋಡೆ ನಡೆದು, ದರೋಡೆಕೋರರು ಎಸ್ಕೇಪ್ ಆಗಿದ್ದು, ಬ್ಯಾಂಕಿನಲ್ಲಿ ಭಾರಿ ಪ್ರಮಾಣದ ಚಿನ್ನ ಇರುವ ವಿಚಾರ ತಮಿಳುನಾಡಿನ ದರೋಡೆಕೋರರಿಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಾಗಿ ಸ್ಥಳೀಯರು ನೆರವಾಗಿದ್ದಾರೆ ಎಂಬ ತರ್ಕ ಮುನ್ನೆಲೆಗೆ ಬರುತ್ತಿದೆ.
ಕದ್ದ ಚಿನ್ನದ ಸಹಿತ ಸುಮಾರು 700 ಕಿ.ಮೀ ದೂರವನ್ನು ದರೋಡೆಕೋರರು ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರಿನಿಂದ ಫಿಯೆಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.
ದರೋಡೆಕೋರರ ಜಾಡು ಹಿಡಿದು ಹೊರಟಿದ್ದ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆಯಾಗಿದೆ. ನಂತರ ಚೇಸಿಸ್ ನಂಬರ್ ಆಧಾರದಲ್ಲಿ ಕಾರಿನ ನೈಜ ಮಾಲೀಕನ ಮಾಹಿತಿ ಸಂಗ್ರಹಿಸಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಪೊಲೀಸರಿಗೆ ಮೂವರು ದರೋಡೆಕೋರರ ಜಾಡು ಪತ್ತೆಯಾಗಿದೆ. ತಮಿಳುನಾಡಿನ ತಿರುನಲ್ವೇಲಿ ಬಳಿ ಮೂವರು ದರೋಡೆಕೋರರನ್ನು ಬಂಧಿಸಲಾಗಿದೆ. ದರೋಡೆ ಸೂತ್ರಧಾರ ಮುರುಗಂಡಿ ಥೇವರನೇ ತಿರುನಲ್ವೇಲಿ ತನಕ ಕಾರು ಚಲಾಯಿಸಿಕೊಂಡು ಹೋಗಿದ್ದ.
ದರೋಡೆ ಮಾಡುವುದಕ್ಕೆಂದು ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರ ಅರು ಜನರ ಜೊತೆ ಮುರುಗಂಡಿ ಥೇವರ್ ಬಂದಿದ್ದ. ಆದರೆ ಐದು ಜನರಷ್ಟೇ ಫಿಯೆಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು. ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿದ್ದ.
ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸೋಮವಾರವೇ ಮಾಹಿತಿ ನೀಡಿದ್ದು, ದರೋಡೆಕೋರರನ್ನು ಹೇಗೆ ಟ್ರ್ಯಾಕ್ ಮಾಡಿ ಬಂಧಿಸಲಾಯ್ತು ಎಂಬುದನ್ನು ವಿವರಿಸಿದ್ದಾರೆ. ಕರ್ನಾಟಕ ಗುಪ್ತಚರ ಇಲಾಖೆ ಕೂಡ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು ಸಹಾಯ ಮಾಡಿತ್ತು. ಬಂಧಿತರಿಂದ ಚಿನ್ನದ ಜತೆಗೆ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.