ಪುತ್ತೂರು : ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ ಗೋವನ್ನು ` ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಬೇಕಾಗಿದೆ. ತಾಯಿ ಸಮಾನಾದ ಗೋವಿನ ಮೇಲೆ ಕ್ರೌರ್ಯ , ಮಾನಸಿಕತೆ ಪ್ರದರ್ಶಿಸುವವರು ಮನುಷ್ಯರೇ ಅಲ್ಲ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಮಾತೆಯ ಕೆಚ್ಚಲು ಕತ್ತರಿಸಿದ ವಿಕೃತ ಮನಸ್ಸುಗಳನ್ನು ಖಂಡಿಸಿ ಪುತ್ತೂರು ಜಿಲ್ಲಾ ಗೋ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮನುಷ್ಯರು ಮಾತ್ರವಲ್ಲದೆ ಸಸ್ಯಕೋಟಿಯನ್ನು ಸಂರಕ್ಷಿಸುವ ಮಾತೆ ಗೋವು. ಕ್ರೂರ ರಾಕ್ಷಸೀ ಪ್ರವೃತ್ತಿ ಹೊಂದಿರುವವರು ಮಾತ್ರ ಗೋವಿನ ಮೇಲೆ ದೌರ್ಜನ್ಯ ನಡೆಸಲು ಸಾಧ್ಯ. ಇದರ ವಿರುದ್ಧ ಹಿಂದೂಗಳು ಪರಿಹಾರ ಕಂಡುಕೊಳ್ಳುವ ಸಂಕಲ್ಪ ಮಾಡಬೇಕು. ಹಿಂದೂಗಳ ತಾಳ್ಮೆಯ ಕಟ್ಟೆಯೊಡೆದಾಗ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಎದುರಿಸಿದ ಹಿಂದೂ ವಿರೋಧಿಗಳಿಗೆ ಮತ್ತೆ ನೆನಪು ಮಾಡಬೇಕು ಎಂದು ಹೇಳಿದರು.
ಶುದ್ಧರಾಮಯ್ಯ’ ಆಗಬೇಕಾದರೆ ಗೋವು ಅನಿವಾರ್ಯ
ಯಾವುದಕ್ಕೂ ಸಿದ್ಧವಿಲ್ಲದ `ಸಿದ್ದರಾಮಯ್ಯ’ `ಶುದ್ಧರಾಮಯ್ಯ’ ಆಗಬೇಕಾದರೆ ಗೋವು ಅನಿವಾರ್ಯ. ಸಿದ್ಧರಾಮಯ್ಯ ಅವರು ಜೀವನದ ಮೋಕ್ಷಕ್ಕಾದರೂ ಒಳ್ಳೆಯ ಕೆಲಸ ಮಾಡಿ ಎಂದು ಆಗ್ರಹಿಸಿದ ನ. ಸೀತಾರಾಮ್, ಇಂತಹ ಕ್ರೌರ್ಯಗಳಿಗೆ ಬೆಂಬಲಿಸುವ ಪ್ರವೃತ್ತಿ ಮುಂದುವರೆದರೆ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಮಾತನಾಡಿ, ಗೋವು ಕೇವಲ ಪ್ರಾಣಿಯಲ್ಲ, ತಾಯಿಗಿಂತಲೂ ಮಿಗಿಲು. ಆದರೆ ಮತಾಂಧರು ಹಿಂದೂ ಸಮಾಜದ ಅಸ್ಮಿತೆಯಾದ ಗೋಮಾತೆಯ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸೂಕ್ತ ಉತ್ತರವನ್ನು ಹಿಂದೂ ಸಮಾಜ ನೀಡಲಿದೆ ಎಂದು ಹೇಳಿದರು.
ಪುತ್ತೂರು ಶಾಸಕರು ತುಂಬಾ ಸ್ಟಂಟ್ ಮಾಡುತ್ತಾರೆ. ಆದರೆ ಇಂತಹ ವಿಚಾರಗಳಲ್ಲಿ ಮಾತನಾಡುತ್ತಿಲ್ಲ. ಜಿಹಾದಿಗಳಿಗೆ ಬೇಜಾರಾಗುತ್ತದೆ ಎಂದು ಮೌನ ವಹಿಸಿದ್ದೀರಾ ? ಎಂದು ಪ್ರಶ್ನಿಸಿದ ಯತೀಶ್, ಈ ಕ್ರೌರ್ಯದ ವಿರುದ್ಧ ಖಂಡನೆ ಮಾಡಿ, ಇಲ್ಲದಿದ್ದರೆ ಹಿಂದೂ ಸಮಾಜದ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.
ವಿಹಿಂಪ ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ ಮಾತನಾಡಿ, ಗೋವಿನ ಮೇಲೆ ದೌರ್ಜನ್ಯ ನಡೆಸಿದಾತನ ವಿರುದ್ಧ ಮೃದು ಧೋರಣೆ ತೋರುವ ಗೃಹ ಸಚಿವರು ಮಾನಸಿಕ ಅಸ್ವಸ್ಥ ಎಂಬ ಸರ್ಟಿಫಿಕೇಟ್ ನೀಡಿದ್ದಾರೆ. ಇಂತಹ ಧೋರಣೆಯನ್ನೇ ತೋರುವ ವ್ಯವಸ್ಥೆಯನ್ನು ಸರಿ ಮಾಡುವ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ ಎಂದರು. ಪಾಕಿಸ್ತಾನದಂತಹ ಎರಡು ದೇಶಗಳ ಜನಸಂಖ್ಯೆ ನಮ್ಮ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಇದು ಹಿಂದೂ ಸಮಾಜದ ಶಕ್ತಿ ಎಂದು ಉಲ್ಲೇಖಿಸಿದರು.
ಸಂಘಟನೆಯ ವಿಶಾಖ್ ಸಸಿಹಿತ್ಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಭಟನ ಮೆರವಣಿಗೆ ಆರಂಭದಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿ ಗೋ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆ ಹೊರಟು ಕೆ.ಎಸ್.ಆರ್.ಟಿ.ಸಿ. ನಿಲ್ದಾಣ, ಗಾಂಧಿಕಟ್ಟೆ, ಕೋರ್ಟು ರಸ್ತೆಯ ಮೂಲಕ ಸಾಗಿ ತಾಲೂಕು ಆಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಬಿಜೆಪಿ ಹಾಗೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.