ಸಿಲಿಂಡರ್ಗಳು ಸ್ಫೋಟಿಸಿ ಕನಿಷ್ಠ 25 ಟೆಂಟ್ಗಳು ಭಸ್ಮ
ಪ್ರಯಾಗ್ರಾಜ್: ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಸಾಧುಗಳಿಗೆ ತಂಗಲು ನಿರ್ಮಿಸಿದ್ದ ಕನಿಷ್ಠ 25 ಟೆಂಟ್ಗಳು ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಭಸ್ಮವಾಗಿವೆ. ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್ಗಳು ಸ್ಫೋಟಗೊಂಡು ಟೆಂಟ್ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಪ್ರಯಾಗ್ರಾಜ್ ಎಡಿಜಿಪಿ ಭಾನು ಭಾಸ್ಕರ್ ತಿಳಿಸಿದ್ದಾರೆ.
ಅಗ್ನಿ ಅವಘಡದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಆಗಲೇ ಅವಘಡ ಹೇಗೆ ಸಂಭವಿಸಿತು ಎಂಬುದನ್ನು ನಾವು ಹೇಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್ಗಳಿಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅವಘಡದಿಂದಾಗಿ ಮಹಾಕುಂಭಮೇಳ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಟೆಂಟ್ನಲ್ಲಿ ಇರುವವರನ್ನು ಅಧಿಕಾರಿಗಳು ದೂರ ಕಳುಹಿಸಿದ್ದಾರೆ.
ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟೆಂಟ್ಗಳ ವ್ಯವಸ್ಥೆ ಮಾಡಲಾಗಿದ್ದು, ಟೆಂಟ್ನಲ್ಲಿ ಆಹಾರ ಮಾಡಿಕೊಳ್ಳುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಂಟ್ನಲ್ಲಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಿಎಂ ಆದಿತ್ಯನಾಥ್ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆಯ ಉನ್ನತ ತನಿಖೆಗೆ ಯೋಗಿ ಆದಿತ್ಯನಾಥ್ ಆದೇಶಿಸಿದ್ದು, ನಾಶವಾದ ಟೆಂಟ್ನಲ್ಲಿದ್ದವರಿಗೆ ಕೂಡಲೇ ಬದಲಿ ವ್ಯವಸ್ಥೆ ಮಾಡಿಕೊಡಲಾಗಿದೆ.