ಪುತ್ತೂರು: ತಾಲೂಕಿನ ದೇವಸ್ಥಾನ ಹಾಗೂ ದೈವಸ್ಥಾನಗಳ ಚರಿತ್ರೆಯನ್ನೊಳಗೊಂಡ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ಅರ್ಪಿಸುವ “ದಿವ್ಯದರ್ಶನ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ ಮರೀಲ್ ನಲ್ಲಿರುವ ದಿ ಪುತ್ತೂರು ಕ್ಲಬ್ ನಲ್ಲಿ ನಡೆಯಿತು.

ಸಂವಿಧಾನದ ನಾಲ್ಕನೇ ಒಂದು ಭಾಗ ನ್ಯೂಸ್ ಪುತ್ತೂರು : ಸಂಜೀವ ಮಠಂದೂರು
ಮುಖ್ಯ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಾವೆಲ್ಲಾ ಇದ್ದು, ಪ್ರಜೆಗಳೇ ಪ್ರಭುಗಳೆಂದು ಸಂವಿಧಾನ ಪೀಠಿಕೆಯಲ್ಲಿ ಉಲ್ಲೇಖವಾಗಿದೆ. ಸಂವಿಧಾನ ಇತ್ತೀಚಿನ ದಿನಗಳಲ್ಲಿ ಅಡಕವಾಗಿದೆ. ಜಗತ್ತಿನ ಅತೀ ದೊಡ್ಡ ರಾಷ್ಟ್ರ ಎಂದೆನಿಸಿಕೊಳ್ಳಬೇಕಾದರೆ ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಮೂರು ಸಂವಿಧಾನಕ್ಕೆ ಆಧಾರವಾಗಿದೆ. ಅದರಂತೆ ಮಾಧ್ಯಮವು ಆ ಮೂರು ಆಧಾರ ಸ್ತಂಭಕ್ಕೆ ನಾಲ್ಕನೇದ್ದಾಗಿ ಸೇರಿದೆ. ನಾಲ್ಕನೇಯ ಒಂದನೇ ಭಾಗ ನ್ಯೂಸ್ ಪುತ್ತೂರು ಎನ್ನಲು ಹೆಮ್ಮೆಯಾಗುತ್ತದೆ. ಪ್ರಿಂಟ್, ಎಲೆಕ್ಟ್ರಾನಿಕ್, ಸಾಮಾಜಿಕ ಮಾದ್ಯಮಗಳ ಮೂಲಕ ಕೈಗೆಟಕುವ ರೀತಿಯಲ್ಲಿ ಮಾಹಿತಿ ಲಭ್ಯವಾಗುವಷ್ಟು ಮಾಧ್ಯಮಗಳು ಪರಿವರ್ತನೆಗೊಂಡಿದೆ. ಪರಿವರ್ತನೆ ಜಗದ ನಿಯಮ ಭಗವಾನ್ ಶ್ರೀ ಕೃಷ್ಣನ ಮಾತಿನಂತೆ ಪರಿವರ್ತನೆ ನೀಡುವ ಕಾರ್ಯವನ್ನು ನ್ಯೂಸ್ ಪುತ್ತೂರು ಸಂಸ್ಥೆ ಮಾಡಿದೆ. ಇಂದು ದಿವ್ಯ ದರ್ಶನದ ಮುಖಾಂತರ ಭಗವಂತನ ದರ್ಶನ ಮಾಡುವಾಗೆ ಆಂತರಿಕವಾಗಿ ದಿವ್ಯತೆ, ಭವ್ಯತೆಯನ್ನು ವ್ಯಕ್ತಿಯಲ್ಲಿ ಮೂಡಿಸುವಂತ ಕೆಲಸ ಮಾಧ್ಯಮದಲ್ಲಿ ಮಾಡಬಹುದೆಂಬುವುದನ್ನು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ತೋರಿಸಿದೆ. ಇದು ಕೇವಲ ವ್ಯಕ್ತಿಗೋಸ್ಕರ, ಸಂಘಟನೆಗೋಸ್ಕರ ಹುಟ್ಟಿದ ಸಮರ್ಪಣಾ ಟ್ರಸ್ಟ್ ಆಗದೆ, ಸಮರ್ಪಣಾ ಮನೋಭಾವದಿಂದ ಸೇವೆ, ಸಮಾಜದ ಬದಲಾವಣೆಗಾಗಿ , ಪ್ರಜಾಪ್ರಭತ್ವದ ಮೂಲ್ಯವನ್ನು ಉದ್ದೀಪನಗೊಳಿಸಲು ಮಾಧ್ಯಮದ ಮೂಲಕ ಪುತ್ತೂರು ಜನತೆಯ ವಿಶ್ವಾಸ ಬೆಳೆಯಲು ಹಲವಾರು ಕವಲುಗಳನ್ನು ದಾಟಿ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಹೇಳಿದರು.
ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿದೆ: ಬಲರಾಮ್ ಆಚಾರ್ಯ
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ್ ಆಚಾರ್ಯ ಮಾತನಾಡಿ, ಸಮಾಜ ಮುಖಿಯಾದ ಉದ್ದೇಶವನ್ನಿಟ್ಟುಕೊಂಡು ಟ್ರಸ್ಟ್ ನ ಮೂಲಕ ಮಾಧ್ಯಮವನ್ನು ಪ್ರಾರಂಭ ಮಾಡಿದ್ದು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯನ್ನು ಕಾಣಬಹುದು. ಜಗತ್ತಿನಲ್ಲಿ ಮಾಧ್ಯಮಗಳಲ್ಲಿ ಹೆಚ್ಚು ಸ್ಪರ್ಧೆಗಳನ್ನು ಕಾಣಬಹುದು. ಅನೇಕ ವೆಬ್ ಚಾನಲ್, ಪತ್ರಿಕೆಗಳಿವೆ. ಆದರೆ ನ್ಯೂಸ್ ಪುತ್ತೂರು ಸಂಸ್ಥೆ ತತ್ವವನ್ನು ಆಧಾರವಾಗಿರಿಸಿಕೊಂಡಿದೆ. ತತ್ವದ ಮೂಲಕ ಕೆಲಸ ಮಾಡಿದರೆ ಯಶಸ್ಸನ್ನು ಕಾಣವುದು ತೀರ ಸುಲಭ. ವಸ್ತು ನಿಷ್ಠತೆ, ನಿಖರತೆ, ವಿಶ್ವಾಸರ್ಹತೆ, ಬೆರಳ ತುದಿಯಲ್ಲಿ ಸಚಿತ್ರ ವರದಿ, ಚಲಿಸುತ್ತಲೇ ಓದಿ ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮುಂದುವರೆಯುವ ಸಂಸ್ಥೆ ಬೆಳೆಯಲು ಮೂಲ ಕಾರಣವಾಗಿದೆ. ಸಮರ್ಪಣಾ ಚಾರಿಟೇಬಲ್ ಸಂಸ್ಥೆ ಮೂಲಕ ಪ್ರಾರಂಭವಾದ ನ್ಯೂಸ್ ಪುತ್ತೂರು ಸಂಸ್ಥೆ ರಾಷ್ಟ್ರವ್ಯಾಪಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
“ದಿವ್ಯದರ್ಶನ” ಶೀರ್ಷಿಕೆಯಡಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೀಯ : ಸತ್ಯಶಂಕರ ಭಟ್
“ದಿವ್ಯದರ್ಶನ” ಪುಸ್ತಕವನ್ನು ಪರದೆ ಸರಿಸುವ ಮೂಲಕ ಎಸ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಅನಾವರಣಗೊಳಿಸಿ ಮಾತನಾಡಿ, ಸಾವಿರ ವರ್ಷಗಳ ಹಿಂದೆ ಶಿಲೆ ಲಿಪಿ, ನೂರು ವರ್ಷಗಳ ಹಿಂದೆ ತಾಳೆ ಲಿಪಿಯನ್ನು ಕಾಣಬಹುದು, ಪ್ರಸ್ತುತವಾಗಿ ಪುಸ್ತಕ ಚಲಾವಣೆ ಇದೆ. ಭಾರತ ದೇಶದಲ್ಲಿ ತಂತ್ರಜ್ಞಾನ ಮುಂದುವರಿದಂತೆ ಪುಸ್ತಕ ಯುಗ ಕಳೆದು, ಈ- ಪೇಪರ್ ಯುಗವನ್ನು ಕಾಣಲು ಹತ್ತಿರದಲ್ಲೇ ಇದ್ದೇವೆ. ಈಗಿನ ಕಾಲ ಮಟ್ಟದಲ್ಲಿ ಮೊಬೈಲ್, ಲ್ಯಾಪ್ ಟಾಪ್ ಮೂಲಕ ಮಾಹಿತಿ ಕಲೆ ಹಾಕುವುದು ವಾಡಿಕೆಯಾಗಿದೆ. ವಾರ್ತ ಪ್ರಸಾರವನ್ನು ಕೇಳುವುದು, ಪುಸ್ತಕ ಓದುವುದನ್ನು ಮರೆತಿದ್ದೇವೆ ಎಂದು ಹೇಳಿದ ಅವರು, ಇಂದು ದಿವ್ಯದರ್ಶನ ಎಂಬ ಶೀರ್ಷಿಕೆಯಡಿಯಲ್ಲಿ ಪುತ್ತೂರು ತಾಲೂಕಿನ ದೇವಸ್ಥಾನ, ದೈವಸ್ಥಾನಗಳ ಚರಿತ್ರೆಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಂಡಿದ್ದು ಅಭಿನಂದನೆಯ ಕಾರ್ಯವಾಗಿದೆ. ಅತೀ ಹೆಚ್ಚು ದೇವಾಲಯವಿರುವುದು ದಕ್ಷಿಣ ಕನ್ನಡದಲ್ಲಿ ಅಂತಹ ಪುಣ್ಯ ಕ್ಷೇತ್ರಗಳ ವಿಶೇಷತೆಗಳನ್ನು ಗುರುತಿಸುವ ಕೆಲಸ ಮಾಡಿದೆ ಎಂದು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮತ್ತು ನ್ಯೂಸ್ ಪುತ್ತೂರನ್ನು ಶ್ಲಾಘಿಸಿದರು. ಲೇಖನ ಸಮಾಜದ ಅಭಿವೃದ್ದಿಗೆ ಪೂರಕವಾಗಿರಬೇಕು. ಸಮಾಜದ ಮುಂದಿನ ಸವಾಲುಗಳು, ಮಾರ್ಗದರ್ಶನಗಳನ್ನು ತಿಳಿಸುವ ವ್ಯವಸ್ಥೆಗಳಾಗಬೇಕು. ಇನ್ನೂ ಪುಸ್ತಕ, ಮಾಧ್ಯಮಗಳು ಜನರ ಯೋಚನೆಗೆ ತಕ್ಕ ಕೊಂಡೊಯ್ಯುವ, ಚಿಂತನೆಗೆ ಅನುಗುಣವಾಗಿ, ಜನರ ಸವಾಲುಗಳನ್ನು ಎದುರಿಸುವಲ್ಲಿ ಮಾಧ್ಯಮಗಳು ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಹಳ್ಳಿಗಳನ್ನು ತೊರೆದು, ವಿದೇಶದಲ್ಲಿ ಉದ್ಯೋಗಕ್ಕಾಗಿ ವಲಸೆ ಹೋಗುವ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ದೇಶದಲ್ಲಿಯೇ ಸ್ವಂತ ಉದ್ಯಮವನ್ನು ಮಾಡಲು ಮಾಧ್ಯಮಗಳು ಪ್ರೇರೇಪಿಸಬೇಕು. ಸಮಾಜದ ಏಳಿಗೆಗಾಗಿ ಲೇಖನಗಳು, ನ್ಯೂಸ್ ಗಳು ಬರಲಿ ಎಂದು ಹೇಳಿದರು.

ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು : ಪ್ರದೀಪ್ ಆರ್. ಗೌಡ
ಮುಖ್ಯ ಅತಿಥಿಯಾಗಿ ಬೆಂಗಳೂರು ಗೋಲ್ಡ್ ಮ್ಯಾನ್ ಸಚೆಸ್ ನ ಉಪಾಧ್ಯಕ್ಷ ಪ್ರದೀಪ್ ಆರ್ ಗೌಡ ಮಾತನಾಡಿ, ದ.ಕ ದೈವಿಕವಾದ ಜಿಲ್ಲೆ. ಅನೇಕ ದೇವಸ್ಥಾನ , ದೈವಸ್ಥಾನಗಳನ್ನು ಒಳಗೊಂಡು ಇಲ್ಲಿ ಕಾರ್ಣಿಕ ನೆಲೆಯಾಗಿದೆ. ದಿವ್ಯ ದರ್ಶನ ಪುಸ್ತಕ ಸಂಶೋಧನೆಯಂತಿದೆ. ವೇಗವಾದ ಪ್ರಪಂಚದಲ್ಲಿ ಮನ ಶಾಂತಿಗೆ ಭಾರತ ದತ್ತ ಅನೇಕರ ಚಿತ್ತ ಮೂಡಿದೆ. ಸನಾತನ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದು, ನಮ್ಮ ಭಾರತ ದೇಶ. ನಮ್ಮ ದೇಶದ ಧರ್ಮವನ್ನು, ಸಂಸ್ಕೃತಿಯನ್ನು ಉಳಿಸಿಕೊಳುವಲ್ಲಿ ಗಟ್ಟಿತನ, ನಮ್ಮ ದೇಶದ ಜನರಲ್ಲಿದೆ ಎನ್ನಲು ಹೆಮ್ಮೆ ಇದೆ. ದಿವ್ಯ ದರ್ಶನ ಪುಸ್ತಕ ಪ್ರಪಂಚಾದಾದ್ಯಂತ ತಲುಪಬೇಕು, ದಕ್ಷಿಣ ಕನ್ನಡದಲ್ಲಿರುವ ಎಲ್ಲಾ ದೇವಸ್ಥಾನ, ದೈವಸ್ಥಾನಗಳ ಇತಿಹಾಸ ದೇಶದ ಜನರಿಗೆ ಪಸರಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬಂತಾಗಬೇಕು : ರಾಜೇಂದ್ರ ಪ್ರಸಾದ್ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಟೀಕೆಗಳು ಸಾಯ್ತವೆ, ಕೆಲಸ ಮಾತಾಡ್ತವೆ ಎಂಬುದು ಆಗಬೇಕು. ಯಾವುದೇ ಕೆಲಸ ಮಾಡುವುದಿದ್ದರೂ ಕೆಲಸ ಮಾಡುವ ಮನೋಭಾವ ಬೇಕು, ಸಮಾನ ಮನಸ್ಕತೆ ಬೇಕು. ಜೊತೆಗೆ ಸಮಾಜದಲ್ಲಿ ಸೂಕ್ತ ಮಾರ್ಗದರ್ಶನವೂ ನಮಗೆ ಬೇಕು. ನಮ್ಮ ಹಿನ್ನಲೆ, ಸಂಸ್ಕೃತಿ, ಆಚಾರ-ವಿಚಾರಗಳು ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ ಎಂದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಪಕ್ಷಪಾತ, ಸ್ವಜನ ಪಕ್ಷಪಾತಗಳು ಸೃಷ್ಟಿಯಾಗುತ್ತಿವೆ. ಅದೆಲ್ಲವನ್ನು ಮೆಟ್ಟಿ ನಿಂತು ಯಾವುದೇ ಒಂದು ದೊಡ್ಡ ಉದ್ಯಮಿಯೂ ಆಗಿರಬಹುದು, ಸಮಾಜ ಕಟ್ಟ ಕಡೆಯ ವ್ಯಕ್ತಿಗಳೂ ಆಗಿರಬಹುದು ಅವರಿಗೆ ನ್ಯಾಯ ಕೊಡುವ ಉದ್ದೇಶದಿಂದ ನ್ಯೂಸ್ ಪುತ್ತೂರು ಸಂಸ್ಥೆ ಕಟ್ಟಿದ್ದೇವೆ. ಮುಂದೆ ನಾವೇನು ಮಾಡಬೇಕು ಎಂಬುದನ್ನೂ ನಿಶ್ಚಯ ಮಾಡಿದ್ದೇವೆ. ಭಿನ್ನವಾದ ಕೆಲಸಗಳನ್ನು ಕೈಗೆತ್ತಿಕೊಂಡು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವವರಿದ್ದೇವೆ. ಮುಂದೆ ತುರ್ತು ಸಂದರ್ಭದಲ್ಲಿ ಯಾವುದೇ ಬಡ ರೋಗಿಯಾಗಿರಬಹುದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುವ ಕುರಿತು ಸಿಬ್ಬಂದಿಯನ್ನು ನೇಮಿಸಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಜೊತೆಗೆ ಸಮರ್ಪಣಾ ಟ್ರಸ್ಟನ್ನು ದ.ಕ. ಜಿಲ್ಲೆ ಸಹಿತ ಮತ್ತಷ್ಟು ವ್ಯಾಪಿಸುವ ಇರಾದೆ ಇದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸದ ಹಿನ್ನಲೆಯಲ್ಲಿ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ಹರೀಶ್ ಉಬರಡ್ಕ, ಮುರಳೀಧರ ಕೆ.ಎಲ್., ಸತೀಶ್ ಪಾಂಬಾರು, ಚಿದಾನಂದ ಬೈಲಾಡಿ, ಸೀತಾರಾಮ ಕೇವಳ, ವೆಂಕಟೇಶ್ ಭಟ್ ಕೊಯಕ್ಕುಡೆ, ವಸಂತ ಎಸ್. ವೀರಮಂಗಲ, ಸುಶಾಂತ್ ಕೆಡೆಂಜಿ, ನಾಗೇಶ್ ಕೆಡೆಂಜಿ, ಪ್ರವೀಣ್ ಕುಂಟ್ಯಾನ್, ಯತೀಶ್ ಎನ್., ಪ್ರಸಾದ್ ಕೆ.ಎನ್. ಉಪಸ್ಥಿತರಿದ್ದರು.
ನ್ಯೂಸ್ ಪುತ್ತೂರಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ ಸ್ವಾಗತಿಸಿದರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ, ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ವಂದಿಸಿದರು. ನಿರ್ದೇಶಕ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಕ್ಕಳಿಂದ ನೃತ್ಯ, ವಿವಿಧ ಆಟೋಟ ವಿನೋದಾವಳಿಗಳು ನಡೆಯಿತು. ಸಮಾರಂಭದಲ್ಲಿ ನೆರೆದಿದ್ದ ಇಬ್ಬರು ಅದೃಷ್ಟ ವ್ಯಕ್ತಿಗಳನ್ನು ಚೀಟಿ ಎತ್ತುವ ಮೂಲಕ ಅತಿಥಿಗಳು ಆರಿಸಿದರು. ಅದೃಷ್ಟವಂತರಿಗೆ ಬಹುಮಾನ ವಿತರಿಸಲಾಯಿತು.