ಬಾಟಲಿಗೆ 15ರಿಂದ 50 ರೂ. ತನಕ ಹೆಚ್ಚಳ
ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಮದ್ಯ ಎಣ್ಣೆಪ್ರಿಯರ ಜೇಬು ಸುಡಲಿದೆ. ಸರ್ಕಾರ ಮತ್ತೊಮ್ಮೆ ಬಿಯರ್ ಬೆಲೆ ಪರಿಷ್ಕರಿಸಿದ್ದು, ಹೊಸ ಬೆಲೆ ಇಂದಿನಿಂದ ಜಾರಿಗೆ ಬರಲಿದೆ.
ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಆದಾಯ ಬರದೆ ಇರುವುದರಿಂದ ಸದ್ಯಕ್ಕೆ ಬಿಯರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ (ಸ್ಟ್ರಾಂಗ್ ಬಿಯರ್) ಬಿಯರ್ ಬಾಟಲ್ ಒಂದಕ್ಕೆ ಕನಿಷ್ಠ 15 ರಿಂದ 50 ರೂಪಾಯಿವರೆಗೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಬಿಯರ್ ಬೆಲೆ ಜಾಸ್ತಿ ಮಾಡಬೇಕು ಎನ್ನುವ ಪ್ರಸ್ತಾವನೆ ಇತ್ತು. ಆದರೆ ಇದಕ್ಕೆ ಅನುಮೋದನೆ ಸಿಗದೆ ಮುಂದೂಡಿಕೆಯಾಗುತ್ತಿತ್ತು. ಇಂದಿನಿಂದ ಪ್ರತಿ ಬಿಯರ್ನ ಬೆಲೆಯು ಅಲ್ಕೋಹಾಲ್ ಅಂಶದ ಅನುಸಾರ ಏರಿಕೆಯಾಗಲಿದೆ.
ಬಿಯರ್ ಬೆಲೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಂಪನಿಗಳು ಹಾಗೂ ಮದ್ಯಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬಿಯರ್ ಬೆಲೆ ಕರ್ನಾಟಕದಲ್ಲಿ ಹೆಚ್ಚಳವಾಗಿದೆ. ಇನ್ನಷ್ಟು ಬೆಲೆ ಹೆಚ್ಚಳವಾದರೆ, ಬಿಯರ್ ಬೇಡಿಕೆ ಸಹ ಕಡಿಮೆ ಆಗುವ ಸಾಧ್ಯತೆ ಇದೆ ಅಂತ ಕೆಲವು ಬಿಯರ್ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ.