ಶಾಲೆಗಳನ್ನು ಸಂಯೋಜಿಸಲು ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೆಂಗಳೂರು: ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ಅನುಮಾನವೊಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಉಂಟಾಗಿದೆ. ಕಡಿಮೆ ಮಕ್ಕಳು ಇರುವ ಶಾಲೆಯನ್ನು ಹತ್ತಿರದ ಮತ್ತೊಂದು ಶಾಲೆ ಜೊತೆ ಸಂಯೋಜಿಸಲು ಶಿಕ್ಷಣ ಇಲಾಖೆ ಸಿದ್ಧತೆ ಶುರು ಮಾಡಿದೆ. ಅದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇದು ಭಾರಿ ಕಳವಳಕ್ಕೆ ಕಾರಣವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಲು ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್ ಭಾರಿ ವಿರೂಧ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಅದೇ ನಿರ್ಧಾರ ತೆಗೆದುಕೊಂಡಿದೆ.
ತಾಲೂಕು ಮಟ್ಟದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಣ ಗುಣಮಟ್ಟ ಸುಧಾರಿಸಲು ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯನ್ನು ರಚನೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 14 ಜನರನ್ನೊಳಗೊಂಡ ಸಮಿತಿ ಇದಾಗಿದೆ. ಪ್ರತಿ ತಾಲೂಕಿನ ಶಾಸಕರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರರು, ಬಿಇಒ, ಸರ್ಕಾರದಿಂದ ನಾಮ ನಿರ್ದೇಶನಗೊಂಡ 5 ಜನ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.
ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಿದ್ದು, ಶಾಲಾ ದಾಖಲಾತಿ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ತಾಲೂಕಿನಲ್ಲಿನ ಎಲ್ಲ ಅರ್ಹ ಮಕ್ಕಳ ಶಾಲಾ ದಾಖಲಾತಿ, ದಾಖಲಾದ ಮಕ್ಕಳ ನಿರಂತರ ಹಾಜರಾತಿ ಹಾಗೂ ಹಾಜರಾಗುವ ಎಲ್ಲಾ ಮಕ್ಕಳ ಕಲಿಕೆಯನ್ನು ವೃದ್ಧಿಸುವ ಮೂಲಕ ಶಿಕ್ಷಣ ಗುಣಮಟ್ಟ ಸುಧಾರಿಸುವುದು, ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೆ ಶಾಲೆ ಬಿಡುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ ಪ್ರಕ್ರಿಯೆಗಳ ಕುರಿತು ಚರ್ಚಿಸಿ ಸುಧಾರಣಾ ಕ್ರಮ ವಹಿಸುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಸಿಎಸ್‌ಆರ್ ಕಾರ್ಯಕ್ರಮದ ಮೂಲಕ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ನೆರವು ಪಡೆಯಲು ಕ್ರಮ ವಹಿಸುವುದು, ಅತಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಮಕ್ಕಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಯ ಹಿತದೃಷ್ಟಿಯಿಂದ ಈ ಶಾಲೆಗಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸಂಯೋಜಿಸಿ ಸಂಯೋಜಿತ ಶಾಲೆಯನ್ನು ʻHub And Spoke Model’ ರೀತಿಯಲ್ಲಿ ಕೇಂದ್ರ ಶಾಲೆಯಾಗಿ ಅಭಿವೃದ್ಧಿಪಡಿಸುವ ಮೂಲಕ ಶಾಲೆಯ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಕ್ರಮವಹಿಸುವುದು ಸಮಿತಿಯ ಕಾರ್ಯ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.