ಇಂದು ಸಮರ್ಪಣಾದಲ್ಲಿ ಸಂಭ್ರಮದ ಘಳಿಗೆಗಳು.
ಪುತ್ತೂರ ಜನತೆ ಪ್ರೀತಿಯಿಂದ ಸ್ವೀಕರಿಸಿ ತಮ್ಮ ಒಳಮನ-ಮನೆಗಳಿಗೆ ಬಿಟ್ಟುಕೊಂಡ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಲ್ಲಿಂದು ಸಂಭ್ರಮದ ವಾತಾವರಣ ಮನೆಮಾಡಿತ್ತು.
ಟ್ರಸ್ಟ್ ನ ಅಧ್ಯಕ್ಷ ಶ್ರೀ ಕುರಿಯ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಅವರನ್ನು ಸನ್ಮಾನಿಸಿ ಸಂಭ್ರಮಿಸುವ ಕ್ಷಣಗಳು ಸೇರಿದ್ದ ಸರ್ವ ಸದಸ್ಯರ ಮತ್ತು ಆಹ್ವಾನಿತರ ಸಭೆಗೆ ಪ್ರಾಪ್ತವಾಗಿತ್ತು.
ಶ್ರೀಯುತ ರಾಜೇಂದ್ರರು ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಗರಿಷ್ಠ ಮತಗಳಿಕೆಯೊಂದಿಗೆ ಆಯ್ಕೆಯಾದ ಬಾಬ್ತು ಅವರಿಗೆ ಆತ್ಮೀಯವಾದ ಸನ್ಮಾನವೊಂದು ಏರ್ಪಾಡಾಗಿತ್ತು.

ನಿರ್ದೇಶಕರಲ್ಲೋರ್ವರಾದ ಶ್ರೀ ನಾಗೇಶ್ ಕೆಡೆಂಜಿಯವರ ಸ್ವಾಗತದೊಂದಿಗೆ ಆರಂಭವಾದ ಸಭೆಯಲ್ಲಿ ಮತ್ತೋರ್ವ ನಿರ್ದೇಶಕ ಶ್ರೀ ಸೀತಾರಾಮ ಕೇವಳರು ಮಾತನಾಡಿ ಗುತ್ತಿಗೆದಾರರಾಗಿ, ಧಾರ್ಮಿಕ ಮತ್ತು ಸಮಾಜ ಸೇವಕರಾಗಿ ಹೆಸರು ಮಾಡಿದ್ದ ರಾಜೇಂದ್ರರು ಇಂದು ತಮ್ಮ ವ್ಯಕ್ತಿತ್ವಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿಕೊಂಡಿದ್ದಾರೆ. ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕವಾಗಿ ಅವರು ಸಹಕಾರಿಯಾಗಿ ಮಿಂಚಿದ್ದಾರೆ ಎಂದು ಉಲ್ಲೇಖಿಸಿದರು.
ಸಹಕಾರಿ ಸಂಘದ ಚುನಾವಣೆಯಲ್ಲಿ ಜಯ ಸಾಧಿಸುವುದು ವಿಧಾನ ಸಭೆ ಅಥವಾ ಲೋಕಸಭೆಗಳ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ದುಪ್ಪಟ್ಟು ಕಷ್ಟವಾಗಿದೆ. ಇಲ್ಲಿ ಪಕ್ಷ ಸಂಯೋಜನೆಯನ್ನು ಮೀರಿ ವೈಯಕ್ತಿಕ ಸಂಬಂಧಗಳು ಕೆಲಸ ಮಾಡುತ್ತವೆ. ಓರ್ವ ವ್ಯಕ್ತಿ ಜನಾನುರಾಗಿಯಾಗಿದ್ದಲ್ಲಿ ಮಾತ್ರವೇ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧ್ಯವಾದೀತು. ಅಂತಹ ಗೆಲುವನ್ನು ತನ್ನದಾಗಿಸಿಕೊಂಡ ರಾಜೇಂದ್ರರು ಅವರು ಗೆಲ್ಲುವ ಮೂಲಕ ಸಮರ್ಪಣಾವನ್ನು ಸಹ ಗೆಲ್ಲಿಸಿದ್ದಾರೆ ಎಂದರು. ಮುಂದೆ ಅವರು ಸಹಕಾರಿ ಜೀವನಯಾನ ರಾಜ್ಯ ಮಟ್ಟಕ್ಕೆ ತಲುಪಲಿ ಎಂದು ಅವರು ಆಶಿಸಿದರು.
ಮುಂದೆ ಅವರನ್ನು ಸನ್ಮಾನಿಸಿ ಮಾತನಾಡಿದ ಮತ್ತೋರ್ವ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿಯವರು ರಾಜೇಂದ್ರರ ವ್ಯಕ್ತಿತ್ವ ಅತಿ ಸರಳ ಮತ್ತು ಪ್ರಿಯವಾದುದು ಎಂದು ಅವರ ವ್ಯಕ್ತಿತ್ವ ಹೇಗೆ ಮಾದರಿಯಾಗಿದೆ ಎಂಬುವುದನ್ನು ವಿಶ್ಲೇಷಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಶ್ರೀ ಹರೀಶ್ ರೈ ಉಬರಡ್ಕ ಮಾತನಾಡಿ ರಾಜೇಂದ್ರರು ಸುಮಾರು 25 ವರ್ಷಗಳ ಕೆಳಗೆಯೇ ಹೇಗೆ ತನ್ನ ಮಿತ್ರರನ್ನು ಬೆಂಬಲಿಸುತ್ತಿದ್ದರು ಮತ್ತು ಸಹಕಾರಿ ಹಾಗೂ ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸಲು ಪ್ರೋತ್ಸಾಹಿಸುತ್ತಿದ್ದರು ಎಂದು ವಿವರಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಶ್ರೀ ಕುರಿಯ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಅವರು ಸನ್ಮಾನದಲ್ಲಿ ಯಾವ ವಸ್ತುಗಳನ್ನು ನೀಡಿದ್ದಾರೆ ಎನ್ನುವುದಕ್ಕಿಂತ ಈ ಸಮಾರಂಭದಲ್ಲಿ ಎಂತೆಂತಹ ಅಭ್ಯಾಗತರು ಉಪಸ್ಥಿತರಿದ್ದಾರೆ ಎಂಬುದು ಮುಖ್ಯ. ಇಲ್ಲಿರುವ ಘನ ವ್ಯಕ್ತಿಗಳ ಸಮ್ಮುಖದಲ್ಲಿ ಈ ಸನ್ಮಾನ ಸ್ವೀಕರಿಸುವುದು ಅತಿ ಸಂತೋಷದ ವಿಚಾರವಾಗಿದ್ದು ಅವರ ಉಪಸ್ಥಿತಿಯೇ ನನಗೆ ನಿಜವಾದ ಸನ್ಮಾನ ಎಂದರು. ನನ್ನನ್ನು ಸನ್ಮಾನಿಸಿದ ನಿಮ್ಮೆಲ್ಲರ ಆಶಯ, ನಿರೀಕ್ಷೆಗಳಿಗೆ ಅನುಗುಣವಾಗಿ ನನ್ನ ಹೊಸ ಕ್ಷೇತ್ರದಲ್ಲಿ ಕೆಲಸ ಮಾಡಿ ಉತ್ತಮ ಹೆಸರು ಗಳಿಸುತ್ತೇನೆ ಎಂದು ನುಡಿದರು.
ನಿರ್ದೇಶಕ ಶ್ರೀ ಮುರಳೀಧರ ಕೆ.ಎಲ್. ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾದ ಸಭೆಯಲ್ಲಿ
ನಿರ್ದೇಶಕರುಗಳಾದ ಸರ್ವ ಶ್ರೀ ಪ್ರವೀಣ್ ಕುಂಟ್ಯಾನ, ವೆಂಕಟೇಶ್ ಭಟ್ ಕೊಯಕ್ಕುಡೆ, ಸತೀಶ್ ಪಾಂಬಾರು, ಯತೀಶ್ ಎನ್ ಮತ್ತು ಸುಶಾಂತ್ ಕೆಡೆಂಜಿ, ಪ್ರೇರಣಾ ಪುತ್ತೂರು ಇದರ ನಿರ್ದೇಶಕಿ ಶ್ರೀಮತಿ ಮೋಕ್ಷಿತಾ ಮಿಥುನ್, ಪ್ರಬಂಧಕಿ ಶ್ರೀಮತಿ ದಯಾಮಣಿ ನಾಗೇಶ್ ಮತ್ತು ಕಚೇರಿ ಸಿಬ್ಬಂದಿ ರಕ್ಷಿತಾ, ನ್ಯೂಸ್ ಪುತ್ತೂರು ಇದರ ಸಿಬ್ಬಂದಿಗಳಾದ ದೀಪಿಕಾ, ಕುಮಾರ್, ಶ್ರೀಮಾ, ಪ್ರತೀಕ್ಷಾ, ಶ್ರಾವ್ಯ ಮತ್ತು ಧರ್ಮಶ್ರೀ ಉಪಸ್ಥಿತರಿದ್ದರು.