ಅಕ್ರಮವಾಗಿ ಹಂಚಿದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡ ಇ.ಡಿ
ಬೆಂಗಳೂರು : ಮೈಸೂರಿನ ಗಂಗರಾಜು, ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಿನಲ್ಲಿ ನೋಂದಣಿಯಾಗಿದ್ದ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ 142 ಸ್ಥಿರಾಸ್ತಿಯನ್ನು ನಿನ್ನೆ ರಾತ್ರೋರಾತ್ರಿ ಮುಟ್ಟುಗೋಲು ಹಾಕಿಕೊಂಡಿದೆ.
ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರಿನಲ್ಲಿ, ಏಜೆಂಟ್‌ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲೂ ಸ್ಥಿರಾಸ್ತಿ ನೋಂದಣಿಯಾಗಿದ್ದವು. ಮೈಸೂರಿನ ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುಮಾರು 300 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಈ ಕುರಿತಾಗಿ ಪ್ರಕಟಣೆ ಹೊರಡಿಸಿರುವ ಇ.ಡಿ, ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಲಯ ಕಚೇರಿಯ ಜಾರಿ ನಿರ್ದೇಶನಾಲಯ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಸುಮಾರು 300 ಕೋಟಿ ರೂ. ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿಸಿದೆ.
ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಬೇನಾಮಿಗಳು, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಹಿರಂಗವಾಗಿದೆ. ಆಗಿನ ಮುಡಾ ಅಧ್ಯಕ್ಷರು ಮತ್ತು ಮುಡಾ ಆಯುಕ್ತರಿಗೆ ಸ್ಥಿರ ಆಸ್ತಿ, ಮುಡಾ ನಿವೇಶನಗಳು ನಗದು ಇತ್ಯಾದಿಗಳ ರೂಪದಲ್ಲಿ ಅಕ್ರಮವಾಗಿ ಪಾವತಿಸಿದ ಬಗ್ಗೆ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಪಡೆದ ಅಕ್ರಮ ಸಂಭಾವನೆಯನ್ನು ಮತ್ತಷ್ಟು ಅಕ್ರಮವಾಗಿ ವರ್ಗಾಯಿಸಲಾಗಿದೆ. ಅದನ್ನು ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಲಾಗಿದೆ. ಮುಡಾದ ಹಿಂದಿನ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿನಲ್ಲಿ ಆಸ್ತಿ, ಐಷಾರಾಮಿ ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಹಕಾರಿ ಸಂಘದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ. ತಿಳಿಸಿದೆ.