ನಟ ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್‌ ಎಂಟ್ರಿ

24 ತಾಸು ಕಳೆದರೂ ನಿಗೂಢವಾಗಿ ಉಳಿದ ಪ್ರಕರಣ

ಮುಂಬಯಿ : ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಅವರ ಮನೆಯೊಳಗೆ ಆಗಿರುವ ಮಾರಕ ದಾಳಿಯ ಬಗ್ಗೆ ಅನೇಕ ಅನುಮಾನಗಳು ಮೂಡಿರುವಂತೆಯೇ ಈ ಪ್ರಕರಣದ ತನಿಖೆಗೆ ಮುಂಬಯಿಯ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಕನ್ನಡಿಗ ದಯಾ ನಾಯಕ್‌ ಎಂಟ್ರಿಯಾಗಿದ್ದಾರೆ. ನಟನ ಮೇಲಾಗಿರುವ ದಾಳಿಯ ತನಿಖೆಗೆ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ ಒಂದು ತಂಡದ ನೇತೃತ್ವ ದಯಾ ನಾಯಕ್‌ಗೆ ನೀಡಲಾಗಿದೆ. ಗುರುವಾರ ನಸುಕಿನ 2.30ರ ವೇಳೆಗೆ ವ್ಯಕ್ತಿಯೊಬ್ಬ ಸೈಫ್‌ ಅಲಿ ಖಾನ್‌ ಅವರ ಫ್ಲ್ಯಾಟ್‌ಗೆ ನುಗ್ಗಿ ಅವರ ಮೇಲೆ ಚಾಕುವಿನಿಂದ ಮಾರಕವಾಗಿ ದಾಳಿ ಮಾಡಿದ್ದಾನೆ. ಸೈಫ್‌ಗೆ ದೇಹದ ಆರು ಕಡೆ ಇರಿತದ ಗಾಯವಾಗಿದ್ದು, ಚಾಕುವಿನ ಒಂದು ತುಂಡು ಕೂಡ ಅವರ ಬೆನ್ನಿನ ಗಾಯದಲ್ಲಿ ಉಳಿದಿತ್ತು. ಲೀಲಾವತಿ ಆಸ್ಪತ್ರೆಯ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಇದನ್ನು ಹೊರತೆಗೆದಿದ್ದು, ಈಗ ನಟ ಅಪಾಯದಿಂದ ಪಾರಾಗಿದ್ದಾರೆ.

ದಯಾ ನಾಯಕ್‌ ಈಗಾಗಲೇ ಲೀಲಾವತಿ ಆಸ್ಪತ್ರೆ ಮತ್ತು ಘಟನೆ ನಡೆದಿರುವ ಸೈಫ್‌ ಅಲಿಖಾನ್‌ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ಜನವರಿ 16ರಂದು ಹಲವು ಪೊಲೀಸ್ ಅಧಿಕಾರಿಗಳು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಅಪಾರ್ಟ್​ಮೆಂಟ್​ಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ ಎನ್​ಕೌಂಟರ್ ದಯಾ ನಾಯಕ್ ಸಹ ಆಗಮಿಸಿದ್ದರು. ಸೈಪ್ ಅಲಿ ಖಾನ್ ಪ್ರಕರಣದ ತನಿಖೆಗೆ ಮಾಡಲಾಗಿರುವ ಏಳು ತಂಡಗಳಲ್ಲಿ ಒಂದು ತಂಡದ ಜವಾಬ್ದಾರಿ ಎನ್​ಕೌಂಟರ್ ದಯಾನಾಯಕ್ ವಹಿಸಿಕೊಂಡಿದ್ದಾರೆ.































 
 

ಸೈಫ್ ಅಲಿ ಖಾನ್​ಗೆ ಚಾಕು ಚುಚ್ಚಿದವನ ಉದ್ದೇಶ ಏನಿತ್ತು? ಘಟನೆ ನಡೆದಿದ್ದು ಹೇಗೆ? ಘಟನೆ ನಡೆದ ಬಳಿಕ ಆತ ಮನೆಯಲ್ಲೇ ಪಾರಾಗಿದ್ದು ಹೇಗೆ? ಚಾಕು ಇರಿದವನ ಹಿಂದೆ ಯಾವುದಾದರೂ ತಂಡ ಇದೆಯೇ? ಇನ್ನಿತರ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪ್ರತಿಷ್ಠಿತರು ಮತ್ತು ಅತಿ ಸಿರಿವಂತರೆ ವಾಸವಾಗಿರುವ ಗರಿಷ್ಠ ಭದ್ರತೆಯ ವಸತಿ ಸಂಕೀರ್ಣದೊಳಗೆ ಅಪರಿಚಿತನೊಬ್ಬ ಅನಾಯಾಸವಾಗಿ ಪ್ರವೇಶಿಸಿ ನಟನ ಮನೆಯ ಒಳಗೂ ಹೋಗಿ ಇಷ್ಟು ಸುಲಭವಾಗಿ ಹಲ್ಲೆ ಮಾಡಿದ್ದು ಬಾಲಿವುಡ್‌ ಸಿನೇಮಾಗಳಿಗೂ ಹೆಚ್ಚು ನಿಗೂಢವಾಗಿ ಕಾಣಿಸುತ್ತಿದೆ. ಘಟನೆಯಲ್ಲಿ ಸೈಫ್‌ ಮಾತ್ರವಲ್ಲದೆ ಅವರ ಇಬ್ಬರು ಕೆಲದವರಿಗೂ ಗಾಯವಾಗಿದೆ.

ಕೆಲಸದಾಕೆ ಹೇಳಿದ್ದೇನು?

ದಾಳಿಕೋರ ಮೊದಲು ಹೋಗಿದ್ದು ಸೈಫ್‌ ದಂಪತಿಯ ನಾಲ್ಕು ತಿಂಗಳ ಮಗುವಿದ್ದ ಕೋಣೆಗೆ. ಈ ಮಗುವನ್ನು ನೋಡಿಕೊಳ್ಳುವ ಕೆಲಸದಾಕೆ ಹೇಳಿದ ಪ್ರಕಾರ ರಾತ್ರಿ ಸುಮಾರು 2 ಗಂಟೆಗೆ ಎಚ್ಚರವಾದಾಗ ಶೌಚಾಲಯದಲ್ಲಿ ಬೆಳಕು ಕಂಡುಬಂತು ಮತ್ತು ಯಾರೋ ಇರುವಂತೆ ಕಂಡಿತು. ಕರೀನಾ ಕಪೂರ್‌ ಹೋಗಿರಬಹುದು ಎಂದು ಭಾವಿಸಿ ಅವರು ಮಲಗಿದರು. ಆದರೂ ಮನದಲ್ಲಿ ಏನೋ ಸಂಶಯ ಇತ್ತು. ಹೀಗಾಗಿ ಮತ್ತೊಮ್ಮೆ ಎದ್ದು ಶೌಚಾಲಯದ ಬಳಿ ಹೋದಾಗ ವ್ಯಕ್ತಿಯೊಬ್ಬ ಅದರಿಂದ ಹೊರಬಂದು ಚಾಕು ತೋರಿಸಿ ಬಾಯಿಮುಚ್ಚಿರು ಎಂದು ಬೆದರಿಸಿ ನೇರ ಮಗು ಮಲಗಿದ್ದ ಕೋಣೆಗೆ ಹೋದ. ಮುವಿನ ಜೊತೆಗೆ ಅದನ್ನು ನೋಡಿಕೊಳ್ಳುವ ನ್ಯಾನಿ ಕೂಡ ಇದ್ದರು. ಇಬ್ಬರು ಸೇರಿ ವ್ಯಕ್ತಿಯನ್ನು ತಡೆಯಲು ಯತ್ನಿಸಿದ್ದು, ಆಗ ಉಂಟಾದ ಶಬ್ದದಿಂದ ಸೈಫ್‌ಗೆ ಎಚ್ಚರವಾಗಿದೆ. ಅವರು ಬಂದು ವ್ಯಕ್ತಿಯನ್ನು ತಡೆದು ನಿನಗೆ ಏನು ಬೇಕೆಂದು ಕೇಳಿದಾಗ 1 ಕೋಟಿ ರೂ. ಬೇಕೆಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಸೈಫ್‌ ಮತ್ತು ಆತನ ನಡುವೆ ಹೊಡೆದಾಟವಾಗಿದ್ದು, ಆತ ಚೂರಿಯಿಂದ ಯದ್ವಾತದ್ವಾ ಇರಿದಿದ್ದಾನೆ. ಈ ಗಲಾಟೆಯಿಂದ ಎಚ್ಚೆತ್ತು ಕರೀನಾ ಕಪೂರ್‌ ಮತ್ತು ಮಗ ಇಬ್ರಾಹಿಂ ಓಡಿ ಬಂದಾಗ ವ್ಯಕ್ತಿ ಓಡಿ ಮೆಟ್ಟಿಲ ಮೂಲಕ ಕೆಳಗೆ ಹೋಗಿದ್ದಾನೆ.

ರಿಕ್ಷಾದಲ್ಲಿ ಆಸ್ಪತ್ರೆಗೆ

ಕೂಡಲೇ ಇಬ್ರಾಹಿಂ ತಂದೆಯನ್ನು ಲಿಫ್ಟ್‌ನಲ್ಲಿ ಕೆಳಗೆ ತಂದು ಕಾರಿನ ಚಾಲಕನಿಗಾಗಿ ಹುಡುಕಾಡಿದ್ದಾರೆ. ಅವನು ಮನೆಗೆ ಹೋಗಿದ್ದು, ಬರುವಷ್ಟು ಹೊತ್ತು ಕಾಯಲು ಸಾಧ್ಯವಿರಲಿಲ್ಲ. ವಿಪರೀತ ರಕ್ತಸ್ರಾವವಾಗುತ್ತಿದ್ದ ಕಾರಣ ಸಿಕ್ಕಿದ ರಿಕ್ಷಾವೊಂದರಲ್ಲಿ ಹಾಕಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಕ್ಷಣ ಚಿಕಿತ್ಸೆ ಕೊಡಿಸಿದ ಕಾರಣ ಪ್ರಾಣ ಉಳಿದಿದೆ. ಇದೇ ವೇಳೆ ಕೋಟಿಗಟ್ಟಲೆ ಬೆಲೆಬಾಳುವ ಹಲವು ಕಾರು ಇದ್ದರೂ ಅಗತ್ಯಕ್ಕೆ ಒದಗಿದ್ದು ಬಡ ರಿಕ್ಷಾ ಚಾಲಕ ಎಂದು ಅನೇಕರು ಸೋಷಿಯಲ್‌ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top