ಬಂದೂಕು ತೋರಿಸಿ ಸಿಬ್ಬಂದಿಯನ್ನು ಬೆದರಿಸಿ 10 ಕೋಟಿ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿ
ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುತ್ತಿರುವಾಗಲೇ ಕೃತ್ಯ
ಮಂಗಳೂರು : ಉಳ್ಳಾಲ ತಾಲೂಕಿನ ಕೆ.ಸಿ ರೋಡ್ನ ಕೋಟೆಕಾರು ಬ್ಯಾಂಕ್ಗೆ ಇಂದು ಮಧ್ಯಾಹ್ನ ನುಗ್ಗಿದ ಐವರು ಮುಸುಕುಧಾರಿಗಳು ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳನ್ನು ಬೆದರಿಸಿ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಹಾಡಹಗಲೇ ಬ್ಯಾಂಕ್ಗೆ ನುಗಿದ ಐವರು ದರೋಡೆಕೋರರು ಕೃತ್ಯ ಎಸಗಿದ್ದಾರೆ. ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಅದರ ಭದ್ರತೆಗೆ ತೆರಳಿದ್ದರು. ಈ ಅವಕಾಶ ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಫಿಯೆಟ್ ಕಾರಿನಲ್ಲಿ ಬಂದ ದರೋಡೆಕೋರರು ಬಂದೂಕು ತೋರಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರನ್ನು ಬೆದರಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ತಂಡದಲ್ಲಿದ್ದ ಆರು ಮಂದಿಯಿದ್ದು, ಓರ್ವ ರಸ್ತೆಯಲ್ಲಿ ಕಾವಲು ನಿಂತಿದ್ದ. ಈದು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದು, ಶುಕ್ರವಾರವಾದ ಕಾರಣ ಎಲ್ಲರೂ ಪ್ರಾರ್ಥನೆಗಾಗಿ ಮಸೀದಿಗೆ ಹೋದ ಕಾರಣ ಜನಸಂಚಾರ ವಿರಳವಾಗಿತ್ತು. ಈ ಸಂದರ್ಭ ನೋಡಿ ದರೋಡೆ ಕೃತ್ಯ ನಡೆಸಿದ್ದಾರೆ.
ಈ ತಂಡ ಮಂಗಳೂರು ಕಡೆಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.
ಬ್ಯಾಂಕ್ಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಯು.ಟಿ ಖಾದರ್ ಅವರ ವಿಧಾನಸಭಾ ಕ್ಷೇತ್ರವಾಗಿದೆ.
ಕೆ.ಸಿ ರೋಡ್ನ ಕೋಟೆಕಾರು ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆಯಾಗಿದೆ. ತಲ್ವಾರ್, ಗನ್ನಿಂದ ಬೆದರಿಸಿ ಬ್ಯಾಂಕ್ ದರೋಡೆ ಮಾಡಿದ ಮಾಹಿತಿ ದೊರೆತಿದೆ. ಜನಸಂದಣಿ ಕಡಿಮೆ ಇರುವ ಸಮಯದಲ್ಲೇ ದರೋಡೆ ನಡೆಸಿದ್ದಾರೆ. ಆರೋಪಿಗಳ ಬಂಧಿಸಲು ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಜಿಲ್ಲಾಡಳಿತದಿಂದ ಪೊಲೀಸರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಖಾದರ್ ಹೇಳಿದ್ದಾರೆ.