ಕೈತುಂಬ ಸಂಬಳದ ನೌಕರಿ, ಐಷರಾಮಿ ಬದುಕು ತೊರೆದು ಅಧ್ಯಾತ್ಮದತ್ತ ಹೋದ ಪ್ರತಿಭಾವಂತ
ಪ್ರಯಾಗ್‌ರಾಜ್ : ಇಲ್ಲಿ ನಡೆಯುತ್ತಿರುವ ವೈಭವದ ಮಹಾಕುಂಭಮೇಳದಲ್ಲಿ ಅನೇಕ ವಿಸ್ಮಯಗಳು ಗಮನ ಸೆಳೆಯುತ್ತವೆ. ಮಹಾಕುಂಭಮೇಳದ ಪ್ರಧಾನ ಅಂಗವಾಗಿರುವ ನಾಗಸಾಧುಗಳ ವಿಚಿತ್ರ ವೇಷಭೂಷಣ, ವರ್ತನೆ, ನಿಗೂಢ ಬದುಕು ಎಲ್ಲವೂ ಕುತೂಹಲಕರವಾಗಿವೆ. ಒಬ್ಬೊಬ್ಬ ನಾಗಸಾಧು ಒಂದೊಂದು ವೈಶಿಷ್ಟ್ಯ ಹೊಂದಿದ್ದಾರೆ. ಕುಂಭಮೇಳ ಜರುಗುವಾಗ ಮಾತ್ರ ನಾಗರಿಕ ಪ್ರಪಂಚದಲ್ಲಿ ಕಾಣಿಸಿಕೊಳ್ಳುವ ಈ ನಾಗಸಾಧುಗಳನ್ನು ನೋಡಲು, ಅವರ ಆಶೀವಾದ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ನಾಗಸಾಧುಗಳ ಪೈಕಿ ಈ ಸಲ ಬಹಳ ಸುದ್ದಿ ಮಾಡುತ್ತಿರುವವರು ಅಭಯ್ ಸಿಂಗ್ ಎಂಬ ನಾಗಸಾಧು.
ಇವರು ಅಂತಿಂಥ ಸಾಧು ಅಲ್ಲ, ಬಾಹ್ಯಾಕಾಶ ಇಂಜಿನಿಯರಿಂಗ್ ಪದವಿ ಹೊಂದಿರುವ ಪ್ರತಿಭಾವಂತ. ಈಗ ಲೌಕಿಕವಾದ ಎಲ್ಲವನ್ನೂ ಬಿಟ್ಟು ಮೈತುಂಬ ಭಸ್ಮ ಲೇಪಿಸಿಕೊಂಡು ನಾಗಸಾಧು ಆಗಿ ನಿಗೂಢವಾಗಿ ಬದುಕುತ್ತಿದ್ದಾರೆ. ಮುಂಬಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ನಾಲ್ಕು ವರ್ಷ ಏರೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದ ಅಭಯ್ ಸಿಂಗ್ ಈಗ ಸನ್ಯಾಸ ಸ್ವೀಕರಿಸಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರುವ ಕೆಲಸವನ್ನು ತೊರೆದು ಅಧ್ಯಾತ್ಮದ ಮಾರ್ಗದೆಡೆಗೆ ನಡೆದಿದ್ದಾರೆ. ಮಹಾಕುಂಭಮೇಳದಲ್ಲಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಇವರು ಆಧ್ಯಾತ್ಮದ ಮೂಲಕ ಜೀವನದ ಅರ್ಥವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಇಂಜಿನಿಯರಿಂಗ್ ತೊರೆದು 4 ವರ್ಷ ಮುಂಬಯಿಯಲ್ಲಿ ಫೋಟೋಗ್ರಫಿ ಕೆಲಸ ಮಾಡಿದ್ದ ಅಭಯ್ ಸಿಂಗ್ ಟ್ರಾವೆಲ್ ಫೋಟೋಗ್ರಫಿಯಲ್ಲಿ ವೃತ್ತಿಪರ ಕೋರ್ಸ್ ಮಾಡುತ್ತಾ ಮುಂದೆ ಕೋಚಿಂಗ್ ಸೆಂಟರ್ ತೆಗೆದು ಮಕ್ಕಳಿಗೆ ಭೌತಶಾಸ್ತ್ರ ಪಾಠ ಹೇಳಿಕೊಡುತ್ತಿದ್ದರು.
ಕೆಲ ವರ್ಷಗಳಿಂದ ಲೌಕಿಕ ಜೀವನ ಹಾಗೂ ಪ್ರಾಪಂಚಿಕ ಸಂತೋಷಗಳನ್ನು ತ್ಯಜಿಸಿದ್ದಾರೆ. ಮೋಕ್ಷಕ್ಕೆ ದಾರಿ ಅಂದುಕೊಂಡು, ಹಣ ಮುಖ್ಯವಲ್ಲ, ನೆಮ್ಮದಿ ಬಹಳ ಮುಖ್ಯ ಎಂದು ತನ್ನ ಆಸಕ್ತಿಯನ್ನು ಆಧ್ಯಾತ್ಮಿಕತೆಯ ಕಡೆಗೆ ತಿರುಗಿಸಿದ್ದಾರೆ. ತನ್ನ ಇನ್ನುಳಿದ ಜೀವನವನ್ನು ಆಧ್ಯಾತ್ಮಿಕತೆಗೆ ಮುಡಿಪಾಗಿರಿಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.