ಚಿನ್ನದ ಕಾಣಿಕೆಗಳನ್ನು ವಿಂಗಡಿಸುವಾಗ ಎಗರಿಸುತ್ತಿದ್ದ ನೌಕರ ಸೆರೆ
ತಿರುಪತಿ: ಭಕ್ತರು ತಿರುಪತಿಯ ತಿಮ್ಮಪ್ಪನಿಗೆ ಭಕ್ತಿಯಿಂದ ಸಮರ್ಪಿಸಿದ್ದ ಅರ್ಧ ಕೆಜಿಗೂ ಅಧಿಕ ಬಂಗಾರದ ಒಡವೆಗಳು ಕಳವು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬನನ್ನು ಕಳ್ಳತನಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.
ವಿ. ಪೆಂಚಲಯ್ಯ ಬಂಧಿತ ಆರೋಪಿ. ಈತ ಕಳೆದ ಒಂದು ವರ್ಷದಲ್ಲಿ 10 ರಿಂದ 15 ಸಲ ಚಿನ್ನದ ಬಿಸ್ಕೆಟ್ ಮತ್ತು ಇತರ ಆಭರಣಗಳು ಸೇರಿ ಸುಮಾರು 46 ಲಕ್ಷ ರು. ಮೌಲ್ಯದ 650 ಗ್ರಾಂ ಚಿನ್ನವನ್ನು ಕಳವು ಮಾಡಿದ ಆರೋಪ ಕೇಳಿ ಬಂದಿದೆ. ವೆಂಕಟೇಶ್ವರನ ಸನ್ನಿಧಿಗೆ ಭಕ್ತರು ನೀಡುವ ಕಾಣಿಕೆಯನ್ನು ಪರಕಾಮಣಿಯಲ್ಲಿ ವಿಂಗಡಿಸಲಾಗುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದ ಪೆಂಚಲಯ್ಯ ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಚಿನ್ನದ ಬಿಸ್ಕೆಟ್ ಕದಿಯಲು ಯತ್ನಿಸುತ್ತಿದ್ದಾಗ ಆತ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಜ.12ರಂದು ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.