ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ದಿನವಾದ ಮಂಗಳವಾರ ರಾತ್ರಿ ಬಲಿಮೂರ್ತಿಗೆ ಕನಕಾಭಿಷೇಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಂಗಳವಾರ ಬೆಳಿಗ್ಗೆ ಧನುರ್ಮಾಸದ ಪೂಜಾ ಕಾರ್ಯಗಳು ಸಂಪನ್ನಗೊಂಡಿದ್ದು, ರಾತ್ರಿ ಪೂಜೆಯ ಬಳಿಕ ಕನಕಾಭಿಷೇಕ ಜರಗಿತು. ಹರಿವಾಣದಲ್ಲಿ ವೀಳ್ಯದೆಲೆ, ಅಡಿಕೆ, ಕಾಳು ಮೆಣಸಿ, ಚಿನ್ನ, ಬೆಳ್ಳಿಯ ತುಣುಕುಗಳನ್ನು ಸುವಸ್ತುಗಳೊಂದಿಗೆ ಹಾಕಿ ದೇವಸ್ಥಾನದ ಒಳಾಂಗಣದಲ್ಲಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ನಡೆಯ ಎದುರು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕನಕಾಭಿಷೇಕ ನಡೆಸಿಕೊಟ್ಟರು. ವ್ಯವಸ್ಥಾಪನಾ ಸಮಿತಿ ಸದಸ್ಯ, ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯರು ಪೂಜಾ ಕಾರ್ಯಕ್ರಮ ನಡೆಸಿದರು. ಪೂಜೆಯ ಮೊದಲು ಪಲ್ಲಕ್ಕಿ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ಒಳತ್ತಡ್ಕ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ., ವಿನಯ ಸುವರ್ಣ, ಈಶ್ವರ ಬೆಡೇಕರ್, ಮಾಜಿ ಮೊಕ್ತೇಶರ ಎನ್.ಕೆ.ಜಗನ್ನಿವಾಸ ರಾವ್, ನಗರಸಭಾ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕಾರ್ಯನಿರ್ಹನಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.