ಮನು ಭಾಕರ್‌ ಪದಕ ಹಿಂಪಡೆಯಲು ಒಲಿಂಪಿಕ್ಸ್‌ ಸಮಿತಿ ನಿರ್ಧಾರ

ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಪದಕ ಹಿಂಪಡೆಯಲು ಕಾರಣ ಏನು ಗೊತ್ತೆ?

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್-2024ರ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟು ಮನು ಭಾಕರ್‌ ಗೆದ್ದಿರುವ ಎರಡು ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ ಸಮಿತಿ ಹಿಂಪಡೆಯಲಿದೆ. ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ನಿರ್ಮಿಸಿದ್ದರು. ಭಾರತದ ಕೀರ್ತಿ ಪಾತಾಕೆ ಮುಗಿಲೆತ್ತರಕ್ಕೇರಲು ಕಾರಣವಾಗಿದ್ದ ಈ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಹಾಗೆಂದು ಮನು ಭಾಕರ್‌ ಅವರಿಂದ ಏನೂ ತಪ್ಪು ಆಗಿಲ್ಲ, ಪದಕಗಳ ಬಣ್ಣ ಬದಲಾಗುತ್ತಿದ್ದು, ಕಳಪೆ ಪದಕಗಳನ್ನು ನೀಡಿದ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಪದಕಗಳನ್ನು ಬದಲಾಯಿಸಲು ಒಲಿಂಪಿಕ್ಸ್‌ ಸಮಿತಿ ತೀರ್ಮಾನಿಸಿದೆ.

ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನೀಡಲಾದ ಪದಕಗಳ ಬಣ್ಣಗಳು ಬದಲಾಗುತ್ತಿವೆ ಎಂಬ ದೂರು ಕೇಳಿ ಬಂದಿವೆ. ಹೀಗಾಗಿ ಮನು ಭಾಕರ್ ಸೇರಿದಂತೆ ವಿಶ್ವದ ಎಲ್ಲ ಕ್ರೀಡಾಪಟುಗಳಿಂದ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಅದಕ್ಕೆ ಬದಲಾಗಿ ಹೊಸ ಪದಕಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿರುವ ಹಲವು ಕ್ರೀಡಾಪಟುಗಳ ಮೆಡಲ್​ಗಳ ಬಣ್ಣ ಬದಲಾಗಿವೆ. ಕಳಪೆ ಗುಣಮಟ್ಟದ ಪದಕಗಳ ಚಿತ್ರಗಳನ್ನು ಕೆಲ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಗಮನ ಸೆಳೆದಿದ್ದರು.































 
 

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಪದಕಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿಯು ಮೊನೈ ಡಿ ಪ್ಯಾರಿಸ್‌ ಎನ್ನುವ ಕಂಪನಿಗೆ ಪದಕ ಮಾಡುವ ಗುತ್ತಿಗೆಯನ್ನು ನೀಡಿತ್ತು. ಇದು ಫ್ರಾನ್ಸ್‌ ದೇಶದ ನಾಣ್ಯಗಳು ಮತ್ತು ಇತರ ಕರೆನ್ಸಿಗಳನ್ನು ಉತ್ಪಾದಿಸುವ ಸರಕಾರಿ ಸ್ವಾಮ್ಯದ ಕಂಪನಿಯಾಗಿದೆ. ಇದೀಗ ದೂರು ಬಂದ ಹಿನ್ನಲೆ ಮೊನೈ ಡಿ ಪ್ಯಾರಿಸ್‌ ಕಂಪನಿ ಕ್ರೀಡಾಪಟುಗಳ ಹಾನಿಗೊಳಗಾದ ಪದಕಗಳನ್ನು ಬದಲಾಯಿಸಲು ನಿರ್ಧರಿಸಿದೆ.

ವಿಶೇಷ ಎಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನೀಡಲಾದ ಪದಕಗಳಲ್ಲಿ ಐಫೆಲ್ ಟವರ್‌ನ ಕಬ್ಬಿಣದ ತುಂಡುಗಳನ್ನು ಬಳಸಲಾಗಿದೆ. ಈ ಮೂಲಕ ಒಟ್ಟು 5,084 ಪದಕಗಳನ್ನು ನಿರ್ಮಿಸಲಾಗಿತ್ತು. ಇದೀಗ ಪದಕಗಳ ಬಣ್ಣಗಳು ಬದಲಾಗುತ್ತಿರುವ ದೂರುಗಳು ಬಂದ ಹಿನ್ನಲೆಯಲ್ಲಿ, ಕ್ರೀಡಾಪಟುಗಳಿಂದ ಮೆಡಲ್ ಹಿಂಪಡೆದು ಹೊಸ ಪದಕಗಳನ್ನು ನೀಡಲು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮನು ಭಾಕರ್ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೊದಲ ಕಂಚು ಗೆದ್ದ ಮನು, ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದಾದ ಬಳಿಕ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಸ್ವಾತಂತ್ರ್ಯದ ನಂತರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top