ಆಕಾಶದಿಂದ ಪುಷ್ಪವೃಷ್ಟಿ; ಸರಕಾರದ ಸಿದ್ಧತೆಗೆ ಬೇಷ್ ಎಂದ ಜನ
ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಸೋಮವಾರದಿಂದ ಕುಂಭಮೇಳ ಆರಂಭವಾಗಿದ್ದು ಮೊದಲ ದಿನವೇ ಸುಮಾರು 1.6 ಕೋಟಿ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳೆಗೆದ್ದು ಸ್ನಾನ ಮಾಡಿದ್ದರು.
ಮಕರ ಸಂಕ್ರಾಂತಿ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಪ್ರಥಮ ಶಾಹಿ ಸ್ನಾನ ಮಾಡಿದ್ದಾರೆ. ಮೊದಲಿಗೆ ಶ್ರೀ ಪಂಚಯತಿ ಅಖಾಡ ಮಹಾನಿರ್ವಾಣಿ ಹಾಗೂ ಶ್ರೀ ಶಂಭು ಪಂಚ ಯತಿ ಆಟಲ್ ಅಖಾಡದವರು ಅಮೃತ ಸ್ನಾನ ಮಾಡಿದರು. ಬಳಿಕ ಅನ್ಯ ಅಖಾಡದವರು, ಭಸ್ಮಲೇಪಿತ ನಾಗಸಾಧುಗಳು, ಸಂತರು, ಕಲ್ಪವಾಸಿಗಳು ಹಾಗೂ ಭಕ್ತರು ಸ್ನಾನ ಮಾಡಿದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಲಾಯಿತು.
ಪುಷ್ಪವೃಷ್ಟಿ
ಪುಣ್ಯಸ್ನಾನ ಮಾಡುತ್ತಿರುವ ಭಕ್ತರ ಮೇಲೆ ಹೆಲಿಕಾಪ್ಟರ್‌ಗಳಲ್ಲಿ ತಂದು ಗುಲಾಬಿ ಹೂವಿನ ಪಕಳೆಗಳನ್ನು ಸುರಿಯಲಾಗಿದೆ. ಈ ಮನಮೋಹಕ ದೃಶ್ಯದ ವೀಡಿಯೊ ತುಣುಕುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಉತ್ತರ ಪ್ರದೇಶ ಮಾಡಿದ ತಯಾರಿಗೆ ಜನ ಬೇಷ್ ಎಂದಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಕರ ಸಂಕ್ರಾಂತಿಯಂದು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುಣ್ಯ ಪ್ರಾಪ್ತಿ ಮಾಡಿಕೊಂಡ ಭಕ್ತರಿಗೆ ಅಭಿನಂದನೆ, ಇದು ನಂಬಿಕೆ, ಸಮಾಜ, ಸಂಸ್ಕೃತಿಯ ಸಂಗಮ ಎಂದಿದ್ದಾರೆ. ಅಂತೆಯೇ, ಕುಂಭದ ಆಡಳಿತ, ಸ್ಥಳೀಯ ಆಡಳಿತ, ಸ್ವಚ್ಛತಾ ಕರ್ಮಿಗಳು, ಸ್ವಯಂಸೇವಕರು ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಧನ್ಯವಾದ ಸಲ್ಲಿಸಿದರು. ಕುಂಭದ ಮೊದಲ ದಿನವಾದ ಸೋಮವಾರ 1.5 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದರು.