ಅನುಮಾನಕ್ಕೆ ಕಾರಣವಾದ ಚಾಲಕನ ದೂರು
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಲು ನಾಯಿಗಳು ಅಡ್ಡಬಂದದ್ದು ಕಾರಣ ಎನ್ನಲಾಗಿತ್ತು. ಕಾರಿನಲ್ಲೇ ಇದ್ದ ಸಚಿವೆಯ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ಮಾಧ್ಯಮದವರ ಮುಂದೆ ನಾಯಿಗಳು ಅಡ್ಡಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದರು.
ಆದರೆ ಈಗ ಕಾರಿನ ಚಾಲಕ ಅಪರಿಚಿತ ಕಂಟೇನರ್ ಚಾಲಕನ ವಿರುದ್ಧ ಹಿಟ್ & ರನ್ ದೂರು ದಾಖಲಿಸಿರುವುದರಿಂದ ಈ ಅಪಘಾತದ ಕುರಿತು ಅನುಮಾನ ಮೂಡುವಂತಾಗಿದೆ.
ಈ ದೂರಿನಿಂದಾಗಿ ಓವರ್‌ಟೇಕ್ ಮಾಡುವಾಗ ಕಾರು ಅಪಘಾತಕ್ಕೀಡಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಬೆಳಗಾವಿ ಸಮೀಪ ಕಾರು ಅಪಘಾತ ಸಂಭವಿಸಿತ್ತು.
ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಮ್ಮ ಮುಂದೆ ಲೈನ್ 1ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಸಿಗ್ನಲ್ ಕೊಡದೆ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ. ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೆ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ಕಾರಿನ ಚಾಲಕ ದೂರು ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲೂ ನಾಯಿಗಳು ಅಡ್ಡ ಬಂದ ವಿಚಾರವನ್ನು ಡ್ರೈವರ್ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೇಸ್ ದಾಖಲಿಸಿ ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.