ಜಿಲ್ಲಾಧಿಕಾರಿಯನ್ನು ವೇದಿಕೆಯಿಂದ ಕೆಳಗಿಳಿಸಿದ ಘಟನೆಗೆ ವಿಪಕ್ಷ ಸಿಡಿಮಿಡಿ
ಬೆಂಗಳೂರು: ಸಾರ್ವಜನಿಕ ಸಮಾರಂಭದಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಗದರಿಸಿ ಕೆಳಗಿಳಿಯಲು ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ತನೆಯನ್ನು ವಿಪಕ್ಷಗಳು ತೀಕ್ಷ್ಣವಾಗಿ ಟೀಕಿಸಿವೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಎರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ದಲಿತರನ್ನು ನಡೆಸಿಕೊಳ್ಳುತ್ತಿರುವ ರೀತಿ ಇದು ಎಂದು ಅನೇಕರು ಟೀಕಿಸಿದ್ದಾರೆ. ಜಿಲ್ಲಾಧಿಕಾರಿ ದಲಿತ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.
ಘಟನೆ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಜಿಲ್ಲಾಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ದರ್ಪದ ವರ್ತನೆ ತೋರಿದ್ದಾರೆ ಎಂದು ಕಿಡಿಕಾರಿದೆ. ಅಧಿಕಾರದ ಅಮಲು ನೆತ್ತಿಗೆ ಏರಿದಾಗ ಈ ರೀತಿಯ ದುರಹಂಕಾರದ ಮಾತುಗಳು ಬರುತ್ತವೆ. ವೇದಿಕೆ ಮೇಲೆ ಜನರ ಮುಂದೆ ಹೀರೊ ಆಗಲು ಹೋದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಕರೆದು ದುರಹಂಕಾರ ತೋರಿಸಿದ್ದಾರೆ ಎಂದು ಟೀಕಿಸಿದೆ.
ಹಣ ಹಂಚಿ, ರಾಜಕೀಯ ಪ್ರಭಾವ ಬಳಸಿ ಚುನಾವಣೆ ಗೆಲ್ಲುವ ಸಿದ್ದರಾಮಯ್ಯನವರೇ, ಅವರು ನಿಮ್ಮಂತೆ ದಲಿತರನ್ನು ತುಳಿದು ದಲಿತರ ಅಧಿಕಾರ ಆಸ್ತಿ ಕಿತ್ತುಕೊಂಡು ಅಧಿಕಾರಿ ಆಗಿಲ್ಲ. ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಓದಿ ದೇಶದ ಅತ್ಯುನ್ನತ ಅಧಿಕಾರವನ್ನು ಗಿಟ್ಟಿಸಿಕೊಂಡಿದ್ದಾರೆ. ಗೌರವ ಕೊಟ್ಟು ಗೌರವ ಪಡೆಯುವ ವಿವೇಕ ರಾಜ್ಯದ ಮುಖ್ಯಮಂತ್ರಿಗೆ ಇಲ್ಲ ಎಂದರೆ ಹೇಗೆ?.. ಎಂದು ಬಿಜೆಪಿ ಪ್ರಶ್ನಿಸಿದೆ.
ಪ್ರತಿಪಕ್ಷ ಜೆಡಿಎಸ್ ಕೂಡ ಸಿದ್ದರಾಮಯ್ಯನವರ ವರ್ತನೆಯನ್ನು ಖಂಡಿಸಿದ್ದು, ಸಿದ್ದರಾಮಯ್ಯ ಅವರೇ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಿಮ್ಮ ದರ್ಪ, ಅಹಂಕಾರವನ್ನು ಜಿಲ್ಲಾಧಿಕಾರಿಗಳ ಮೇಲೆ ತೋರಿಸಬೇಡಿ. ಸಭೆ ಸಮಾರಂಭಗಳಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿಯ ಸರ್ವಾಧಿಕಾರಿ ವರ್ತನೆ ಖಂಡನೀಯ. ನಿಮ್ಮ ಸಿಟ್ಟು, ಅಸಹನೆಯನ್ನು ಪಕ್ಷದ ಕಚೇರಿಯಲ್ಲಿ ಪ್ರದರ್ಶಿಸಿಕೊಳ್ಳಿ. ಜಿಲ್ಲಾಧಿಕಾರಿಗಳ ಮೇಲೆ ದರ್ಪ ತೋರಿಸಬೇಡಿ. ಇದು ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಗೆ ಶೋಭೆಯಲ್ಲ ಎಂದು ಹೇಳಿದೆ.
ಏನಿದು ಘಟನೆ?
ವಿಜಯನಗರ ಜಿಲ್ಲೆಯ ಬಂಡಿಹಳ್ಳಿಯಯಲ್ಲಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ವೇದಿಕೆ ಏರಿದ ಸಿದ್ದರಾಮಯ್ಯ, ವೇದಿಕೆ ಮೇಲೆ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಕಂಡು ಕೆರಳಿ ಕೆಂಡವಾಗಿದ್ದಾರೆ. ನೀನ್ಯಾರು ಎಂದು ಏಕವಚನದಲ್ಲೇ ಪ್ರಶ್ನಿಸಿದಾಗ ನಾನು ಜಿಲ್ಲಾಧಿಕಾರಿ ಎಂದು ಅವರು ಉತ್ತರಿಸಿದ್ದಾರೆ. ಅದಕ್ಕೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಡಿಸಿಯಾಗಿ ನೀನು ಇಲ್ಲಿ ಕುಳಿತುಕೊಳ್ಳಬಾರದು. ಸ್ವಾಮೀಜಿಗಳ ಪಕ್ಕ ಕುಳಿತಿರುವುದು ಸರಿಯಲ್ಲ. ಬೇರೆ ಕಡೆ ಹೋಗು ಎಂದು ದಬಾಯಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ತಮ್ಮ ಆಸನವನ್ನು ಬಿಟ್ಟು ಬೇರೆ ಕಡೆ ಹೋಗಿ ಕುಳಿತರು. ಸಿದ್ದರಾಮಯ್ಯನವರನ್ನು ಟೀಕಿಸಲು ವಿಪಕ್ಷಗಳಿಗೆ ಈ ವೀಡಿಯೊ ಒಳ್ಳೆಯ ಅಸ್ತ್ರವಾಗಿ ಸಿಕ್ಕಿದೆ.
ಸಿದ್ದರಾಮಯ್ಯ ನವರ ಅಂತ್ಯದ ದಿನ ಹತ್ತಿರ ಬರುತ್ತಿದೆ ಅದಕ್ಕೇ ವಿಪರೀತ ಬುದ್ಧಿ. ಜಿಲ್ಲಾದಿಕಾರಿಯನ್ನು ವೇದಿಕೆಯಿಂದ ಕೆಳಗಿಳಿಸುವಷ್ಟು ಕೊಬ್ಬೇ. ದಲಿತ ನಾಯಕರು ಏನು ಮಾಡುತ್ತಿದ್ದಾರೆ. ದಲಿತ ನಾಯಕರು ಬಿಜೆಪಿ ಯವರಿಗೆ ದಿಕ್ಕಾರ ಕೂಗೋಕೆ ಸೀಮಿತವೇ.