ಕಡಬ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೋಮವಾರ ಕಡಬ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಯ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಬೇಡಿಕೆ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಸಂಸದರು ಸವಣೂರು, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಕಡಬದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಅಗತ್ಯವಾದ ಜಮೀನನ್ನು ಗುರುತಿಸಿ ಕಾದಿರಿಸುವಂತೆ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಸೂಚಿಸಿದರು. ಬೇಡಿಕೆಯ ಕುರಿತು ಕೇಂದ್ರ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದೊಂದಿಗೆ ವ್ಯವಹರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದರು.
ಕಡಬ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ. ನೇತೃತ್ವದ ನಿಯೋಗವು ಸಂಸದರನ್ನು ಭೇಟಿಯಾಗಿ ಕಡಬ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಕೋಡಿಂಬಾಳ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರೈಲು ಬಂಡಿಗಳಿಗೆ ಕೋಡಿಂಬಾಳ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದರು. ಆ ಬಗ್ಗೆ ರೈಲ್ವೇ ಅಽಕಾರಿಗಳ ಜೊತೆಗೆ ಚರ್ಚಿಸುವುದಾಗಿ ಸಂಸದರು ಪ್ರತಿಕ್ರಿಯಿಸಿದರು. ಹಲವು ಮಂದಿ ಸಾರ್ವಜನಿಕರು ವೈಯಕ್ತಿಕ ಹಾಗೂ ಸರ್ವಾಜನಿಕ ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಿದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಪ್ರಮುಖರಾದ ಪುಲಸ್ತ್ಯಾ ರೈ, ಸುರೇಶ್ ದೇಂತಾರು, ಮಧುಸೂಧನ್ ಕೊಂಬಾರು, ಸುವರ್ಣಿನಿ ಪಂಜ, ಮೇದಪ್ಪ ಗೌಡ ಡೆಪ್ಪುಣಿ, ಕೇಶವ ಬೇರಿಕೆ, ಶಿವಪ್ರಸಾದ್ ನಡ್ತೋಟ, ವಾಡ್ಯಪ್ಪ ಗೌಡ ಎರ್ಮಾಯಿಲ್, ಚಂದ್ರಶೇಖರ ಹಳೆನೂಜಿ, ಉಮೇಶ್ ಶೆಟ್ಟಿ ಸಾಯಿರಾಂ, ಅಶೋಕ್‌ಕುಮಾರ್ ಪಿ. ಮುಂತಾದವರು ಉಪಸ್ಥಿತರಿದ್ದರು.
ನೆಲ್ಯಾಡಿ ಪೇಟೆ ಉಳಿಸಿ ಸಮಿತಿಯ ನಿಯೋಗ ಭೇಟಿ:
ನೆಲ್ಯಾಡಿ ಪೇಟೆಯ ಮೂಲಕ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಕಾರಣದಿಂದಾಗಿ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮಕ್ಕೆ ಸೇರಿದ ಪೇಟೆ ಇಬ್ಭಾಗವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಅಲ್ಲಿ ಪಿಲ್ಲರ್‌ಗಳನ್ನು ಬಳಸಿ ಮೇಲ್ಸೇತುವೆ ನಿರ್ಮಿಸಿ ಪೇಟೆಯನ್ನು ಉಳಿಸಿಕೊಡಬೇಕೆಂದು ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ನಿಯೋಗವು ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು ಈಗಾಗಲೇ ಹೆದ್ದಾರಿಗೆ ಸಂಬಂಧಿಸಿದ ಉನ್ನತಾಧಿಕಾರಿಗಳ ಜೊತೆಗೆ ಈ ವಿಚಾರದ ಕುರಿತು ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಹೊಸದಾಗಿ ಅಂದಾಜುಪಟ್ಟಿ ತಯಾರಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಅದು ಅನುಮೋದನೆಗೊಂಡು ಅನುದಾನ ಲಭಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು. ಹೋರಾಟ ಸಮಿತಿಯ ಅಧ್ಯಕ್ಷ ಎ.ಕೆ.ವರ್ಗೀಸ್, ಜತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್ ಕೆ.ಎಸ್., ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಪ್ರಮುಖರಾದ ಸರ್ವೋತ್ತಮ ಗೌಡ, ಕೆ.ಪಿ.ತೋಮಸ್, ಎಂ.ಕೆ.ಇಬ್ರಾಹಿಂ, ನಾಜಿಂ ಸಾಹೇಬ್, ರವಿಪ್ರಸಾದ್ ಶೆಟ್ಟಿ, ರವಿಚಂದ್ರ ಹೊಸವಕ್ಲು, ಮಹೇಶ್, ಮಹಮ್ಮದ್ ಹನೀಫ್ ಮುಂತಾದವರು ನಿಯೋಗದಲ್ಲಿದ್ದರು.