ಭಾರತ-ಪಾಕ್ ಯುದ್ಧದ ಹುತಾತ್ಮ ಯೋಧ; ಜ.24ರಂದು ಸ್ಕೈ ಫೋರ್ಸ್ ದೇಶಾದ್ಯಂತ ಬಿಡುಗಡೆ
ಮುಂಬಯಿ: ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯನ್ನು ಆಧರಿಸಿ ಬಾಲಿವುಡ್‌ನಲ್ಲಿ ಸಿನೆಮಾ ತಯಾರಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಪ್ರಾಣತೆತ್ತ ಕೊಡಗಿನ ವೀರ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ. ಅಕ್ಷಯ್ ಕುಮಾರ್ ಅಜ್ಜಮಾಡ ದೇವಯ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸ್ಕೈ ಫೋರ್ಸ್ ಎಂಬ ಈ ಚಿತ್ರ ಜ.24ರಂದು ತೆರೆಗೆ ಬರಲಿದೆ.
ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಕೊಡಗು ಸೇರಿದಂತೆ ಕರ್ನಾಟಡಕದಲ್ಲಿ ಈ ಚಿತ್ರದ ಬಗ್ಗೆ ಭಾರಿ ಕುತೂಹಲವಿದೆ.
ಪಾಕಿಸ್ಥಾನದ ಸರ್ಗೋಧ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತ್ತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಸಾಹಸ ದೃಶ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಭಾರತೀಯ ವಾಯುಪಡೆಯ ಶೌರ್ಯಗಾಥೆಯನ್ನು ಚಿತ್ರಿಸಲಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶವಿತ್ತು. ಆದರೆ ಜೀವದ ಮೇಲಿನ ಹಂಗು ತೊರೆದು, ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನವನ್ನು ಹೊಡೆದುರುಳಿಸಿ ಹುತಾತ್ಮರಾಗಿದ್ದರು.
ಇತಿಹಾಸದಲ್ಲಿ ದಾಖಲಾಗದೆ ಉಳಿದುಹೋಗಿದ್ದ ಈಘಟನೆ ಹಲವು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನ ಬಿಬಿಸಿ ಸಂದರ್ಶನ ಮಾಡಿದಾಗ ಬೆಳಕಿಗೆ ಬಂದಿತ್ತು. ನಣತರ ಶೌರ್ಯ ಮೆರೆದು ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ ಪುಸ್ತಕ 1965ರ ಯುದ್ಧ ಹಾಗೂ ಮಹಾವೀರʼ ಆಧರಿಸಿ ಸ್ಕೈ ಫೋರ್ಸ್ ಚಿತ್ರ ನಿರ್ಮಿಸಲಾಗಿದೆ. ಮ್ಯಾಡಾಕ್ ಫಿಲ್ಕ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಹಾಗೂ ಜ್ಯೋತಿ ದೇಶಪಾಂಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂದೀಪ್ ಕೇವಾಲಾನಿ ಹಾಗೂ ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಳರ್ ಕೂಡ ವಿವಿಧ ಪಾತ್ರಗಳಲ್ಲಿ ಇದ್ದಾರೆ.