ಎಷ್ಟೇ ಪ್ರತಿಭೆ ಇದ್ದರೂ ಪ್ರೊಫೆಶನಲಿಸಂ ಇಲ್ಲದಿದ್ದರೆ ವ್ಯರ್ಥ
ಎಷ್ಟೋ ಜನ ಅದ್ಭುತವಾದ ಪ್ರತಿಭಾವಂತರು ತಮ್ಮ ವೃತ್ತಿ ಜೀವನದಲ್ಲಿ ಸೋಲಲು ಮುಖ್ಯವಾದ ಕಾರಣ ಏನೆಂದರೆ ವೃತ್ತಿಪರತೆಯ ಕೊರತೆ ಎಂದು ನನ್ನ ಭಾವನೆ.
ವೃತ್ತಿಪರತೆ (Profesionalism) ಅನ್ನುವುದು ನಿಮ್ಮ ಸಾಧನೆಯ ದಾರಿಯಲ್ಲಿ ಒಂದು ಶಕ್ತಿಶಾಲಿಯಾದ ಇಂಧನ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಒಂದಿಷ್ಟು ನಿದರ್ಶನಗಳ ಮೂಲಕ ವಿವರಣೆಯನ್ನು ಕೊಡುತ್ತಾ ಹೋಗುತ್ತೇನೆ.

1) ಟೈಟಾನಿಕ್ ಹಡಗು ಮತ್ತು ಅದರಲ್ಲಿ ಅರಳಿದ ಪ್ರೀತಿ
ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ 1997ರ ಟೈಟಾನಿಕ್ ಸಿನೆಮಾ ನೀವು ನೋಡಿದ್ದೀರಿ ಎಂದಾದರೆ ಆ ದೃಶ್ಯವನ್ನು ನೀವು ಮರೆಯಲು ಸಾಧ್ಯವೇ ಇಲ್ಲ. ಹಡಗಿನಲ್ಲಿ ಜೊತೆಯಾಗಿ ಪ್ರಯಾಣಿಸುವಾಗ ಹುಟ್ಟಿದ ಪ್ರೀತಿಯು ಆ ಯುವಪ್ರೇಮಿಗಳದ್ದು. ಆ ಹಂತದಲ್ಲಿ ಆ ಹುಡುಗ ಒಳ್ಳೆಯ ಚಿತ್ರಕಾರ ಎಂದು ಆ ಹುಡುಗಿಗೆ ತಿಳಿಯುತ್ತದೆ. ಆಕೆ ಒಂದು ವಿಚಿತ್ರವಾದ ಕೋರಿಕೆಯನ್ನು ಅವನ ಮುಂದೆ ಇಡುತ್ತಾಳೆ.
ತಾನು ಎಲ್ಲ ಬಟ್ಟೆ ಬಿಚ್ಚಿ ಒಂದು ವಜ್ರದ ಹಾರ ಮಾತ್ರ ಧರಿಸಿ ಮಲಗುತ್ತೇನೆ. ನೀನು ನನ್ನ ಒಂದು ಚಿತ್ರವನ್ನು ಬಿಡಿಸಬೇಕು ಎಂದು ವಿನಂತಿ ಮಾಡುತ್ತಾಳೆ. ಒಪ್ಪಿಕೊಂಡ ಹುಡುಗನು ಪೇಪರ್ ಮತ್ತು ಪೆನ್ಸಿಲ್ ತೆಗೆದುಕೊಂಡು ಸಿದ್ಧನಾಗುತ್ತಾನೆ. ಆಕೆ ಆತನ ಮುಂದೆ ಪೂರ್ತಿ ಬೆತ್ತಲೆಯಾಗಿ ಮಲಗುತ್ತಾಳೆ.
ಈ ಸನ್ನಿವೇಶವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಕೆಲವು ಅಚ್ಚರಿಯ ಸಂಗತಿಗಳು ಅರ್ಥ ಆಗುತ್ತವೆ.
ತನ್ನ ಪ್ರೇಮ ದೇವತೆ ತನ್ನ ಮುಂದೆ ಬೆತ್ತಲಾಗಿ ಮಲಗಿದರೂ ಆ ಹುಡುಗನು ಒಂದಿಷ್ಟೂ ವಿಚಲಿತನಾಗದೆ ತನ್ನ ಕಲೆಯಲ್ಲಿ ಮುಳುಗಿಬಿಡುತ್ತಾನೆ. ಅವಳೂ ಹಾಗೆಯೇ ಆತನ ಮುಗ್ಧ ಪ್ರೀತಿಯನ್ನು ತನ್ನ ಕಣ್ಣರೆಪ್ಪೆಯಲ್ಲಿ ಬಂಧಿಸಿ ಕಣ್ಣು ಮುಚ್ಚಿ ಮಲಗಿ ಬಿಡುತ್ತಾಳೆ. ಇಬ್ಬರೂ ಸಭ್ಯತೆಯ ಸಣ್ಣ ಗೆರೆಯನ್ನು ದಾಟದೆ ತಮ್ಮ ಪ್ರೀತಿಯನ್ನು ಗೆಲ್ಲಿಸುತ್ತಾರೆ. ವೃತ್ತಿಪರತೆಯ ಅದ್ಭುತವಾದ ಉದಾಹರಣೆ ಇದು.

2) ಅನಿರುದ್ಧ ಮತ್ತು ಅರುಂಧತಿ ಎಂಬ ಅಣ್ಣ ತಂಗಿಯರು
ಬೆಂಗಳೂರಿನಲ್ಲಿ ನಾನು ಒಂದು ನಾಟಕವನ್ನು ನೋಡಲು ಕುಳಿತಿದ್ದೆ. ಅದು ಒಂದು ಅದ್ಭುತವಾದ ಪ್ರೇಮಕಾವ್ಯ ನಾಟಕ. ಅದರಲ್ಲಿ ಇಬ್ಬರು ಪ್ರೇಮಿಗಳ ಪಾತ್ರ ವಹಿಸಿದವರು ಸ್ವತಃ ಒಡಹುಟ್ಟಿದವರಾಗಿದ್ದ ಅನಿರುದ್ಧ (ವಿಷ್ಣು ಸರ್ ಅಳಿಯ) ಮತ್ತು ಆತನ ತಂಗಿ ಅರುಂಧತಿ. ಅಣ್ಣ-ತಂಗಿಯರು ಉತ್ಕಟ ಪ್ರೇಮಿಗಳ ಪಾತ್ರ ವಹಿಸುವುದು ತುಂಬ ಕಷ್ಟ. ಬಾಲ್ಯದಿಂದ ಜೊತೆಯಾಗಿ ಬೆಳೆದು ಬಂದವರು ಅವರು. ಅದು ಕೂಡ ಆ ನಾಟಕದಲ್ಲಿ ತುಂಬ ರೊಮ್ಯಾಂಟಿಕ್ ಆದ ಸನ್ನಿವೇಶಗಳು ಇದ್ದವು. ಆದರೂ ತಮ್ಮ ಪಾತ್ರಗಳನ್ನು ಜೀವಂತವಾಗಿ ಅನುಭವಿಸಿ, ಅಭಿನಯಿಸಿದ ಅನಿರುದ್ಧ ಮತ್ತು ಅರುಂಧತಿ ಅವರಿಗೆ ನಮ್ಮ ಅಭಿನಂದನೆ ಇರಲಿ.

3) ಸೋನು ನಿಗಮ್ ಎಂಬ ಗಾನಗಂಧರ್ವ
ಕರ್ನಾಟಕದ ಅತ್ಯಂತ ಜನಪ್ರಿಯ ಉತ್ಸವ ಆದ ಹಂಪಿ ಉತ್ಸವದಲ್ಲಿ ಒಂದು ವರ್ಷ ಸೋನು ನಿಗಮ್ ಅವರು ಹಾಡಲು ಆಮಂತ್ರಿತ ಆಗಿದ್ದರು. ಸಹಜವಾಗಿ ಲಕ್ಷ ಲಕ್ಷ ಜನರು ಸೇರಿದ್ದರು.
ಆದರೆ ಹವಾಮಾನ ವೈಪರೀತ್ಯದಿಂದ ಸೋನು ನಿಗಂ ಇದ್ದ ಹೆಲಿಕಾಪ್ಟರ್ ಕೆಳಗೆ ಇಳಿಯಲೇ ಇಲ್ಲ. ಭಾರಿ ದಟ್ಟವಾದ ಮೋಡಗಳ ನಡುವೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಸುಮಾರು ಅರ್ಧ ಗಂಟೆ ತಿರುಗಿತು. ಜನರಲ್ಲಿ ಆತಂಕ ಹೆಚ್ಚಿತ್ತು. ಸ್ವತಃ ಸೋನು ನಿಗಂ ಬೆವತು ಹೋಗಿದ್ದರು. ಆ ಹಂತದಲ್ಲಿ ಯಾವ ದುರ್ಘಟನೆ ಕೂಡ ನಡೆಯಬಹುದಿತ್ತು.
ಕೊನೆಗೂ ಆ ಹೆಲಿಕಾಪ್ಟರ್ ಒಂದು ಗಂಟೆಯಷ್ಟು ತಡವಾಗಿ ಭೂಮಿಗೆ ಬಂದು ಇಳಿಯಿತು. ಅರ್ಧ ಗಂಟೆಯ ಕಾಲ ಸೋನು ನಿಗಮ್ ಒತ್ತಡದಲ್ಲಿ ಬೆಂದು ಹೋಗಿದ್ದರು. ನೇರವಾಗಿ ವೇದಿಕೆಯ ಹಿಂಭಾಗಕ್ಕೆ ಬಂದು ಪದ್ಮಾಸನದಲ್ಲಿ ಕುಳಿತು ಒಂದೈದು ನಿಮಿಷ ಮೆಡಿಟೇಶನ್ ಮಾಡಿದರು. ಬೆವರು ಒರೆಸಿಕೊಂಡರು. ಕೆಲವೇ ನಿಮಿಷಗಳಲ್ಲಿ ಸೋನು ನಿಗಮ್ ನಗುನಗುತ್ತಾ ವೇದಿಕೆಯ ಮೇಲಕ್ಕೆ ಬಂದರು. ಅವರು ಅಷ್ಟೂ ಹೊತ್ತು ಅನುಭವಿಸಿದ ಒತ್ತಡ, ಆತಂಕ ಎಲ್ಲವೂ ಮಾಯವಾಗಿತ್ತು. ಮುಂದೆ ಮೂರು ಗಂಟೆ ಹಂಪಿ ಉತ್ಸವದ ಭವ್ಯವಾದ ವೇದಿಕೆಯಲ್ಲಿ ಸೋನು ನಿಗಂ ಹಾಡಿದ್ದೇ ಹಾಡಿದ್ದು. ಸೇರಿದ್ದ ಜನಗಳು ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು.
ಅದು ಸೋನು ನಿಗಮ್ ಅವರ ವೃತ್ತಿಪರತೆ.

4) ಶ್ರೇಯಾ ಘೋಷಾಲ್ ಎಂಬ ಸ್ವರ ದೇವತೆ
ಬೆಂಗಳೂರು ಗಣೇಶನ ಉತ್ಸವದ ಒಂದು ಪೆಂಡಾಲಿನಲ್ಲಿ ಹಾಡಲು ಶ್ರೇಯಾ ಘೋಷಾಲ್ ಅವರಿಗೆ ಸಮಿತಿಯು ಆಮಂತ್ರಣ ನೀಡಿತ್ತು. ಶ್ರೇಯಾ ಘೋಷಾಲ್ ಒಪ್ಪಿದ್ದರು.
ಆದರೆ ಸಂಘಟಕರ ಆತಂಕವು ಬೇರೆಯೇ ಇತ್ತು. ಬೆಂಗಳೂರು ಆದ ಕಾರಣ ಕನ್ನಡ ಹಾಡುಗಳನ್ನು ಆಕೆ ಹಾಡಬೇಕು ಮತ್ತು ಹೆಚ್ಚು ಭಕ್ತಿಗೀತೆಗಳನ್ನು ಹಾಡಲಿ ಎಂದು ಅವರದ್ದು ಆಸೆ. ಆದರೆ ಅದನ್ನು ಆಕೆಗೆ ತಲುಪಿಸುವುದು ಹೇಗೆ? ಆಕೆ ಮಹಾಸ್ಟಾರ್ ಎಂದು ಕರೆಸಿಕೊಂಡವಳು.
ಆದರೆ ಶ್ರೇಯಾ ಘೋಷಾಲ್ ಅವರ ಆಪ್ತ ಸಹಾಯಕರು ‘ಭಯ ಪಡಬೇಡಿ. ಮ್ಯಾಡಮ್ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ’ ಎಂದರು.
ಅಂದಿನ ಕಾರ್ಯಕ್ರಮಕ್ಕೆ ಶ್ರೇಯಾ ಘೋಷಾಲ್ ನಗು ತುಳುಕಿಸುತ್ತ ವೇದಿಕೆಯನ್ನು ಹತ್ತಿದರು. ಸಂಘಟಕರಿಗೆ ಭಾರಿ ಆಶ್ಚರ್ಯ ಎಂದರೆ ಅಂದು ಶ್ರೇಯಾ ಘೋಷಾಲ್ ಹಾಡಿದ್ದು ಶೇ.90 ಕನ್ನಡದ ಮಧುರ ಹಾಡುಗಳನ್ನು ಮತ್ತು ಗಣಪತಿಯ ಭಕ್ತಿಯ ಹಾಡುಗಳನ್ನು.
ಪ್ರತಿಯೊಂದು ಕಾರ್ಯಕ್ರಮಕ್ಕೂ ಭಾರಿ ಸಿದ್ಧತೆಗಳನ್ನು ಮಾಡಿಕೊಂಡು ಶ್ರೇಯಾ ಬರುತ್ತಾರೆ ಅನ್ನುವುದೇ ನನಗೆ ಅಚ್ಚರಿಯ ಸಂಗತಿ. ಅಂದು ಅವರು ಸಾಕಷ್ಟು ಹೊಸ ಹಾಡುಗಳನ್ನು ಕಲಿತು ಬಂದಿದ್ದರು. ಯಾವ ವೇದಿಕೆಯಲ್ಲಿ ಯಾವ ಹಾಡುಗಳನ್ನು ಹಾಡಬೇಕು, ಯಾವ ಪ್ರೇಕ್ಷಕರಿಗೆ ಯಾವ ಹಾಡುಗಳನ್ನು ಹಾಡಬೇಕು ಎನ್ನುವುದನ್ನು ಯಾರಾದರೂ ಆಕೆಯ ಮೂಲಕ ಕಲಿಯಬೇಕು. ಅದಕ್ಕೆ ಶ್ರೇಯಾ ಅವರನ್ನು ಲತಾ ಮಂಗೇಷ್ಕರ್ ಅವರು ತನ್ನ ಉತ್ತರಾಧಿಕಾರಿ ಎಂದು ಕರೆದದ್ದು.

5) ಪ್ರೇಮಾ, ದೇವರಾಜ್ ಮತ್ತು ಕಂಬಾಲಹಳ್ಳಿ ಸಿನೆಮಾ
ಇಪ್ಪತ್ತು ವರ್ಷಗಳ ಹಿಂದೆ ಕಂಬಾಲಹಳ್ಳಿ ಎಂಬ ಕನ್ನಡ ಸಿನೆಮಾ ಬಂದಿತ್ತು. ಒಂದು ಹಳ್ಳಿಯಲ್ಲಿ ನಡೆದ ನರಮೇಧದ ಕಥೆ ಅದು. ಅದರಲ್ಲಿ ದೇವರಾಜ್ ಮತ್ತು ಪ್ರೇಮಾ ತುಂಬಾ ಸೊಗಸಾಗಿ ಅಭಿನಯ ಮಾಡಿದ್ದಾರೆ. ಅತಿ ಎನ್ನಿಸುವ ಶೃಂಗಾರ ದೃಶ್ಯಗಳು ಆ ಸಿನೆಮಾದಲ್ಲಿ ಇದ್ದವು. ಆದರೆ ಪ್ರೇಮಾ ಸಂದರ್ಶನವೊಂದರಲ್ಲಿ ಹೇಳಿದ ಪ್ರಕಾರ ಆ ಸಿನೆಮಾ ಶೂಟಿಂಗ್ ಹೊತ್ತಲ್ಲಿ ಯಾವುದೋ ಕಾರಣಕ್ಕೆ ಅವರಿಬ್ಬರೂ ಮನಸ್ತಾಪವನ್ನು ಮಾಡಿಕೊಂಡು ಮಾತು ಬಿಟ್ಟಿದ್ದರು. ಮುಖ ಕೂಡ ನೋಡುತ್ತಿರಲಿಲ್ಲ.
ಆದರೆ ಕ್ಯಾಮೆರಾ ಮುಂದೆ ನಿಂತಾಗ ಪ್ರೇಮಾ ಶೃಂಗಾರ ದೇವತೆ ಆಗಿ ಬಿಡುತ್ತಿದ್ದರು ಮತ್ತು ದೇವರಾಜ್ ಅದಕ್ಕೆ ಪೂರಕವಾಗಿ ಸ್ಪಂದನೆ ಕೊಡುತ್ತಿದ್ದರು. ಆ ಸಿನೆಮಾ ಒಮ್ಮೆ ನೋಡಿದರೆ ನಿಮಗೆ ಅವರಿಬ್ಬರ ವೃತ್ತಿಪರತೆ ಎದ್ದು ಕಾಣುತ್ತದೆ. ಇದು ವೃತಿಪರತೆಯ ಪರಾಕಾಷ್ಠೆ ಎಂದು ನನ್ನ ಭಾವನೆ.
ಭರತ ವಾಕ್ಯ
ಒಬ್ಬ ಕಲಾವಿದನಾಗಿ ಅಥವಾ ಒಬ್ಬ ಸಾಧಕನಾಗಿ ನಮ್ಮ ವೃತ್ತಿಪರತೆ ಎಂದರೆ ಕಲೆಯನ್ನು ಮತ್ತು ತನ್ನ ವೃತ್ತಿಯನ್ನು ತೀವ್ರವಾಗಿ ಪ್ರೀತಿಸುವುದು, ತನ್ನ ಕಲೆಗೆ ಮತ್ತು ಪಾತ್ರಕ್ಕೆ ಸಂಪೂರ್ಣವಾಗಿ ಸಮರ್ಪಣೆ ಆಗುವುದು ಮತ್ತು ತನ್ನ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ನೀಡಲು ನಿರಂತರ ಸಿದ್ಧನಾಗಿ ಇರುವುದು. That’s all!
ರಾಜೇಂದ್ರ ಭಟ್ ಕೆ.