ಬಾಕಿಯಿರುವ 30 ಸಾವಿರ ಕೋ.ರೂ. 7 ದಿನಗಳಲ್ಲಿ ಬಿಡುಗಡೆ ಮಾಡಲು ಒತ್ತಾಯ
ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿಯಿಟ್ಟಿರುವ ಸುಮಾರು 30 ಸಾವಿರ ಕೋಟಿ ರೂಪಾಯಿ ಕೂಡಲೇ ಬಿಡುಗಡೆಗೊಳಿಸದಿದ್ದರೆ ಭಾರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿ ರಾಜ್ಯ ಗುತ್ತಿಗೆದಾರರ ಸಂಘ ಆರು ಸಚಿವರಿಗೆ ಬರೆದಿರುವ ಪತ್ರ ಸರಕಾರಕ್ಕೆ ಮತ್ತೊಮ್ಮೆ ಮುಜುಗರ ಉಂಟುಮಾಡಿದೆ. ಕಾಂಗ್ರೆಸ್ ಸರಕಾರದಲ್ಲಿ ಶೇ. 60 ಕಮಿಷನ್ ಇಲ್ಲದೆ ಕೆಲಸವಾಗುವುದಿಲ್ಲ ಎಂದು ವಿಪಕ್ಷ ಆರೋಪಿಸಿದ ಬೆನ್ನಲ್ಲೇ ಗುತ್ತಿಗೆದಾರರ ಸಂಘದವರು ನೀಡಿರುವ ಎಚ್ಚರಿಕೆ ವಿಪಕ್ಷಕ್ಕೆ ಹೋರಾಟ ಮಾಡಲು ಇನ್ನೊಂದು ಅಸ್ತ್ರವಾಗಿ ಸಿಕ್ಕಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಎಚ್.ಸಿ ಮಹಾದೇವಪ್ಪ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ, ಬೋಸರಾಜ್ ಅವರಿಗೆ ಅವರ ಇಲಾಖೆಗಳಿಂದ ಬಾಕಿಯಿಟ್ಟಿರುವ ಹಣಕ್ಕಾಗಿ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹಣ ಪಾವತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಉಲ್ಲೇಖಿಸಲಾಗಿದೆ.
ಹಣ ಪಾವತಿ ವಿಚಾರವಾದರೆ ಮಂತ್ರಿಗಳನ್ನೇ ಭೇಟಿ ಮಾಡಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಲಾಗಿದೆ. ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಹಣ ಬಿಡುಗಡೆ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜ್ಯೇಷ್ಠತೆ ಕಡೆಗಣಿಸಿ ಹಣ ಬಿಡುಗಡೆ ಮಾಡಲು ಸಚಿವರು ಸೂಚಿಸಿದ್ದಾರೆ. ಜ್ಯೇಷ್ಠತೆ ಆಧರಿಸಿ ಹಣ ಪಾವತಿ ಆದರೆ ಎಲ್ಲರಿಗೂ ಅನ್ಯಾಯ ಆಗುತ್ತೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಸುಮಾರು 30 ಸಾವಿರ ಕೋಟಿಯಷ್ಟು ಹಣ ಪಾವತಿಯಾಗಬೇಕಿದೆ. ಬಾಕಿ ಹಣ ಬಿಡುಗಡೆ ಆಗದಿದ್ದರೆ ದೊಡ್ಡ ಹೋರಾಟ ಮಾಡುತ್ತೇವೆ. 7 ದಿನಗಳ ಒಳಗೆ ಗುತ್ತಿಗೆದಾರರ ಸಂಘದ ಸಭೆ ಕರೆದು ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತರಲು ತಯಾರಿ ಮಾಡಿದ್ದೇವೆಂದು ಗುತ್ತಿಗೆದಾರರ ಸಂಘ ಎಚ್ಚರಿಸಿದೆ.