ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಲೋಕಾರ್ಪಣೆ | ಶತಮಾನೋತ್ಸವದ ಸವಿನೆನಪಿಗಾಗಿ ‘ಶತಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ | ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ | ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದೆ : ಕ್ಯಾ.ಬ್ರಿಜೇಶ್‍ ಚೌಟ | ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು | ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ : ಪ್ರವೀಣ್‍ ಕುಮಾರ್

ಕಾಣಿಯೂರು: ಸಹಕಾರ ಕ್ಷೇತ್ರ ನಮ್ಮೆಲ್ಲರ  ಏಳಿಗೆಗೆ ಮೂಲ ಸ್ಪೂರ್ತಿಯಾಗಿದ್ದು, ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು, ನಾವು ಮಾತ್ಸರ್ಯ, ದ್ವೇಷ ಎಲ್ಲವನ್ನು ಹೊರಗಿಟ್ಟು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು.

ಅವರು ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಣಿಯೂರು ಇದರ ಶತಮಾನೋತ್ಸವದ ಸವಿನೆನೆಪಿಗಾಗಿ ನಿರ್ಮಾಣವಾದ ನೂತನ ಕಛೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಬಳಿಕ ಕಾಣಿಯೂರು ರಾಮತೀರ್ಥಮಠದ ಜಾತ್ರಾ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರದಲ್ಲಿ ಆಶೀರ್ವಚನ ನೀಡಿದರು.

ದೇಶವಾಸಿಗಳು ಸುಖ ಹಾಗೂ ನೆಮ್ಮದಿಯಿಂದ ಇದ್ದರೆ ಅದಕ್ಕೆ ರೈತ ಹಾಗೂ ಸೈನಿಕ ಕಾರಣ ಅವರನ್ನು ನಾವು ಯಾವತ್ತೂ ನೆನೆಯಲೇಬೇಕು, ನಾವೆಲ್ಲಾ ಸಹಕಾರ ತತ್ವದಡಿಯಲ್ಲಿ ಬದುಕುವ  ವ್ಯವಸ್ಥೆಗಳು ನಡೆದಾಗ ನಮ್ಮ ನಾಡು ದೇಶ ಸುಸ್ಥಿತಿಯಲ್ಲಿರಲು ಸಾಧ್ಯವಿದೆ, ಈ ನಿಟ್ಟಿನ್ಲಲಿ ನಮ್ಮ ಚಾರ್ವಾಕ ಕೃಷಿ ಪತ್ತಿನ ಸಹಕಾರ ನೂರು ವರ್ಷದಲ್ಲಿ ಈ ಭಾಗದ ರೈತರ ಜೀವನಾಡಿಯಾಗಿ ಸಮಾಜದಲ್ಲಿ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅವರ ಕಾರ್ಯವೈಖರಿಯಿಂದ ಸಂಘದ ಘನತೆ ಗೌರವ ಇನ್ನೂ ಹೆಚ್ಚಾಗಿ ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು.































 
 

ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದಲ್ಲಿದೆ : ಕ್ಯಾ.ಬ್ರಿಜೇಶ್‍ ಚೌಟ

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಹೇಗೆ ನಡೆಸಿಕೊಂಡು ಹೋಗಬಹುದು ಎನ್ನುವುದನ್ನು ತೋರಿಸಕೊಟ್ಟ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆ. ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ಇದು ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದಲ್ಲಿದೆ, ಅಂತಹ ಒಂದು ಅಪರೂಪದ ಜನ ನಾವು. ಸಹಕಾರ ಕ್ಷೇತ್ರ ಇಷ್ಟು  ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಪ್ರಾರಂಭಿಸಿದ ಸಹಕಾರಿ ಕ್ಷೇತ್ರವನ್ನು  ಸಾರ್ಥಕತೆ ಮಾಡಿಕೊಂಡ ಜಿಲ್ಲೆ ಇದ್ದರೆ ಅದು ನಮ್ಮ ಜಿಲ್ಲೆ. ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆದ ಬಳಿಕ ಸಹಕಾರಿ ಕ್ಷೇತ್ರಕ್ಕೆ ವಿಶೇಷ ಮಹತ್ವವನ್ನು ನೀಡಿ ಸಹಕಾರ ಕ್ಷೇತ್ರವನ್ನು ವ್ಯವಸ್ಥಿತವಾಗಿ ಜನಮಾನಸಕ್ಕೆ ಉಪಯೋಗ ಆಗುವ ರೀತಿಯಲ್ಲಿ ಕೇಂದ್ರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಚಾರ್ವಾಕ ಕೃಷಿಪತ್ತಿನ ಸಹಕಾರಿ ಸಂಘ ಅದರಲ್ಲಿ ಕೈಜೋಡಿಸುತ್ತಿರುವುದು ವಿಶೇಷವಾಗಿದೆ ಎಂದರು.

ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು

ದ.ಕ ಜಿಲ್ಲಾ ಸಹಕಾರಿ ಯುನಿಯನ್‌ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಕ್ಷೇತ್ರ ಇಂದು ಜಿಲ್ಲೆಯಲ್ಲಿ ಬಲಿಷ್ಠವಾಗಿ ಬೆಳೆದು ಜಿಲ್ಲೆಯ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿದೆ. ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಅದ್ಭುತವಾದ ಕಾರ್ಯಯೋಜನೆಗಳಿಂದ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ, ಇಂತಹ ಸಂಘವನ್ನು ಪಡೆದ ಇಲ್ಲಿನ  ರೈತರು ಪುಣ್ಯವಂತರು ಎಂದರು.   ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೆಶಕ ಎಸ್.ಬಿ.ಜಯರಾಮ್ ರೈ ಮಾತನಾಡಿ,  ಮೊಳಹಳ್ಳಿ ಶಿವರಾಯರು ಪುತ್ತೂರಿನಿಂದ ಮೊಳಗಿಸಿದ ಸಹಕಾರಿ ಕಹಳೆ ಇಂದು ರಾಜ್ಯ , ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸಿ ರಾಷ್ಟ್ರದ ಅಭಿವೃದ್ಧಿಯಲ್ಲಿ ತನ್ನದೇ ಚಾಪು ಮೂಡಿಸಿದೆ. ನೂರು ವರ್ಷ ಪೂರೈಸಿರುವ ಚಾರ್ವಾಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಈ ಭಾಗದ ಜನರ ವಿಶ್ವಾಸವನ್ನು ಗಳಿಸಿ ಶತಮಾನೋತ್ಸವವನ್ನು  ಅರ್ಥಪೂರ್ಣ ಆಚರಿಸಿದೆ ಎಂದರು.

ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ : ಪ್ರವೀಣ್‍ ಕುಮಾರ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬುವುದರೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ನವಚೈತನ್ಯವನ್ನು ತುಂಬುತ್ತಿವೆ , ರೈತರು ಗೌರವಯುತ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತಿವೆ ಎಂದರು.

ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅನೇಕ ಸಾಧನೆಯನ್ನು ಮಾಡಿದೆ. ಈ ಸಂಸ್ಥೆಯನ್ನು ಪ್ರಾರಂಭ ಮಾಡಿದವರು ಇಲ್ಲದಿದ್ದರು ಪ್ರಸ್ತುತ ದಿನಗಳಲ್ಲಿ ಮುನ್ನಡೆಸುವವರು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯನ್ನು ಕಾಣಬೇಕು. ಚರಿತ್ರೆಯನ್ನು ಓದಬೇಕು, ಚರಿತ್ರೆಯನ್ನು ನಿರ್ಮಾಣ ಮಾಡಬೇಕು ಎಂದರು.

ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ ಮಾತನಾಡಿ, ಸಹಕಾರಿ ಸಂಘದ ಪ್ರತಿ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ. ನಾನು ನಿನಗಾಗಿ, ನೀನು ನನಗಾಗಿ , ನಾವಿಬ್ಬರು ಎಲ್ಲರಿಗು ಎಂಬ ತತ್ವವನ್ನು ಎತ್ತಿ ಹಿಡಿಯುವಲ್ಲಿ ಸಹಕಾರ ಸಂಘ ಒಂದಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್ ಅಂಗಾರ  “ಶತಸಂಭ್ರಮ” ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಎಸ್ಎಸ್.ಎಂ.ಎಸ್ ಮೂಲಕ ಮಾಹಿತಿಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಂಘದ ಕಛೇರಿಗೆ ಸಂಪರ್ಕ ಕಲ್ಪಿಸು ನೂತನ ರಸ್ತೆಯನ್ನು ಉದ್ಘಾಟಿಸಿದರು.

ಕಾಣಿಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೆಶಕರಾದ ಅನಂತಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ಲೋಕೇಶ್ ಗೌಡ ಆತಾಜೆ, ಶೀಲಾವತಿ ಮುಗರಂಜ, ವಿಶ್ವನಾಥ ಕೂಡಿಗೆ, ವೀಣಾ ಅಂಬುಲ, ರಮೇಶ್ ಉಪ್ಪಡ್ಕ, ದಿವಾಕರ ಮರಕ್ಕಡ, ಸುಂದರ ಗೌಡ ದೇವಸ್ಯ, ರತ್ನಾವತಿ ಮುದ್ವ, ವಲಯ ಮೇಲ್ವಿಚಾರಕ ವಸಂತ ಎಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಸದಸ್ಯರು, ಸಂಘದ ಮಾಜಿ ಅಧ್ಯಕ್ಷರುಗಳು, ರಾಷ್ಟ್ರಮಟ್ಟದ ಕ್ರೀಡಾ ಸಾಧಕರು, ಸಂಘದ ನಿವೃತ್ತ ಸಿಬ್ಬಂದಿಗಳು, ಹಾಲಿ ಅಧ್ಯಕ್ಷರು, ಸಿಇಒ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್. ಉದನಡ್ಕ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.  ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧ್ವಜಾವರೋಹಣ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top