ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವಿವೇಕಾನಂದ

ಇಂದು ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನ

ಭಾರತವನ್ನು ಓದಬೇಕೆಂದರೆ ವಿವೇಕಾನಂದರನ್ನು ಓದಿ ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತಿವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ ಬಗ್ಗೆ ಮರು ಓದು ಆರಂಭ ಆಗುತ್ತದೆ. ನಮ್ಮ ದೇಶದ ಬಲಿಷ್ಠ ಯುವಜನತೆಗೆ ಹಿಂದೆ, ಇಂದು ಮತ್ತು ಮುಂದು ಕೂಡ ಅವರೇ ನಿಜವಾದ ಐಕಾನ್. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಶತಮಾನವೇ ಸಂದರೂ ಅವರ ತತ್ವ, ಬೋಧನೆಗಳು ಸಾರ್ವತ್ರಿಕ ಸತ್ಯವಾಗಿ ಕಣ್ಣ ಮುಂದೆ ಇರುತ್ತವೆ. ಬೆಳಕಿನ ಕಿರಣಗಳನ್ನು ಚೆಲ್ಲುತ್ತವೆ.

ಅವರು ಮಾಡಿದ ಅಮೆರಿಕದ ಭಾಷಣ































 
 

ವಿವೇಕಾನಂದರು ಅಂದ ಕೂಡಲೇ ನಮಗೆ ಮೊದಲು ನೆನಪಾಗುವುದು ಅವರು ಮಾಡಿದ್ದ ಅಮೆರಿಕದ ಭಾಷಣ. 1893 ಸೆಪ್ಟೆಂಬರ್ 11ರಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಭಾರತಕ್ಕೆ ಒಂದು ಅದ್ಭುತವಾದ ಪ್ರಭಾವಳಿ ತೊಡಿಸಿತ್ತು. ಅದುವರೆಗೆ ಭಾರತ ಅಂದರೆ ಕೇವಲ ಗುಡಿಸಲುಗಳ ರಾಷ್ಟ್ರ, ಕೊಳಚೆಗೇರಿಗಳ ರಾಷ್ಟ್ರ, ಮೌಢ್ಯಗಳ ರಾಷ್ಟ್ರ, ಪುಂಗಿ ಊದುವವರ ರಾಷ್ಟ್ರ ಎಂದು ಪಾಶ್ಚಾತ್ಯರಿಂದ ಅಪಹಾಸ್ಯಕ್ಕೆ ಈಡಾಗಿದ್ದ ಭಾರತಕ್ಕೆ ಅವರ ಭಾಷಣ ಚೇತೋಹಾರಿ ಆಯಿತು. ಅವರ ಭಾಷಣ ಕೇಳಿದ್ದ ವಿದೇಶಿ ವಿದ್ವಾಂಸರು ‘ಭಾರತ ಎಲ್ಲಿದೆ? ನಾವೊಮ್ಮೆ ನೋಡಬೇಕಲ್ಲಾ’ ಎಂದು ಉದ್ಗಾರ ಮಾಡಿದ್ದರೆ ಅದಕ್ಕೆ ಕಾರಣ ಖಂಡಿತವಾಗಿಯೂ ಸ್ವಾಮಿ ವಿವೇಕಾನಂದರು.

ಆದರೆ ವಿವೇಕಾನಂದರು ಅಂದರೆ ಕೇವಲ ಅಮೆರಿಕದ ಭಾಷಣ ಅಲ್ಲ ಅವರು ಭಾರತದ ಉದ್ದಗಲಗಳಿಗೆ ಸಂಚರಿಸಿ ದೇಶದ ಸಂಕಷ್ಟ, ಬಡತನ, ಹಸಿವು, ದೇಶವಾಸಿಗಳ ಉದಾಸೀನ, ಅಂಧಶ್ರದ್ಧೆ, ಮೌಢ್ಯ, ಅಭಿಮಾನ ಶೂನ್ಯತೆ ಇವುಗಳನ್ನು ಹತ್ತಿರದಿಂದ ಗಮನಿಸಿ ಯುವಜನತೆಯನ್ನು ಬಡಿದೆಬ್ಬಿಸುವ ಮತ್ತು ಆವರಿಸಿದ್ದ ಅಂಧಶ್ರದ್ಧೆಯನ್ನು ಮೆಟ್ಟಿನಿಲ್ಲುವ ಶಕ್ತಿ ತುಂಬಿದ್ದನ್ನು ನಾವು ಮರೆಯಬಾರದು.

ಅವರೊಬ್ಬ ಅದ್ಭುತ ದಾರ್ಶನಿಕ

ಅವರು ತತ್ವಜ್ಞಾನಿ, ಸನ್ಯಾಸಿ, ಚಿಂತಕ ಎಲ್ಲವೂ ಹೌದು. ಒಂದು ಘಟನೆಯನ್ನು ನಾನು ನಿಮಗೆ ನೆನಪಿಸಬೇಕು.
1897ರ ಜನವರಿ ತಿಂಗಳಲ್ಲಿ ಅವರು ವಿದೇಶದ ಯಾತ್ರೆಗಳನ್ನು ಮುಗಿಸಿ ಭಾರತಕ್ಕೆ ಹಿಂದೆ ಬಂದಾಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ತೀವ್ರವಾಗಿ ಹರಡಿತ್ತು ಮತ್ತು ಭಾರತ ಅದಕ್ಕೊಬ್ಬ ಸಮರ್ಥ ನಾಯಕನ ಹುಡುಕಾಟ ನಡೆಸಿತ್ತು. ಆಗ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸ್ವಾಮಿಯನ್ನು ಭೇಟಿ ಮಾಡಿ ‘ನಮಗೆ ನಿಮ್ಮ ನಾಯಕತ್ವ ಬೇಕು. ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ’ ಅಂದಾಗ ಸ್ವಾಮೀಜಿ ಹೇಳಿದ ಮಾತು ಅತ್ಯಂತ ಮಾರ್ಮಿಕ ಆಗಿತ್ತು. ‘ನಾನು ಸನ್ಯಾಸಿ. ಬೀದಿಗಿಳಿದು ಹೋರಾಟವನ್ನು ಮಾಡಲಾರೆ. ನನ್ನ ಕೆಲಸ ಜಾಗೃತಿಯನ್ನು ಮೂಡಿಸುವುದು ಮಾತ್ರ. ನೀವು ನಿಮ್ಮ ಹೋರಾಟ ಮುಂದುವರಿಸಿ. ನಾನಿದ್ದರೂ, ಇಲ್ಲದಿದ್ದರೂ ಮುಂದಿನ ಐವತ್ತು ವರ್ಷಗಳ ಒಳಗೆ ಭಾರತ ಸ್ವಾತಂತ್ರ್ಯ ಪಡೆಯುವುದು ಖಂಡಿತ’ ಅಂದರು. ಅವರು ಹೇಳಿದ ಮಾತಿನಂತೆ ಅಂದಿಗೆ ಸರಿಯಾಗಿ ಐವತ್ತು ವರ್ಷಗಳ ನಂತರ ಭಾರತ ಸ್ವಾತಂತ್ರ್ಯ ಪಡೆಯಿತು. ಅದಕ್ಕಾಗಿ ನಾನು ಅವರನ್ನು ವಿಶನರಿ ಎಂದು ಕರೆದೆ.

ಅವರ ಬಗ್ಗೆ ಎಷ್ಟು ಬರೆದರೂ ಬರೆದು ಮುಗಿಯುವುದಿಲ್ಲ

ಅವರ ಹುಟ್ಟಿದ ಹಬ್ಬವು ಇಂದು ರಾಷ್ಟ್ರೀಯ ಯುವ ದಿನ. ಅದಕ್ಕೆ ಪೂರಕವಾಗಿ ಅವರ ಒಂದಿಷ್ಟು (ನನಗೆ ಇಷ್ಟವಾದ) ಅರ್ಥಪೂರ್ಣ ಕೊಟೇಶನ್‌ಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿರುವೆ. ಅವುಗಳಲ್ಲಿ ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿದರೆ ನಮ್ಮ ಬದುಕು ತುಂಬಾ ಅರ್ಥಪೂರ್ಣ ಆಗಬಲ್ಲದು.

ವಿವೇಕಾನಂದರ 14 ಜನಪ್ರಿಯ ಉದ್ಧರಣೆಗಳು

1) ಮಹತ್ಕಾರ್ಯವು ಕೇವಲ ಬಲಿದಾನಗಳಿಂದ ಮಾತ್ರ ಸಾಧ್ಯ ಆಗುತ್ತದೆ.

2) ಶಕ್ತಿಯೇ ಜೀವನ ಮತ್ತು ದೌರ್ಬಲ್ಯವೇ ಮರಣ. ವಿಕಸನವೇ ಜೀವನ. ಸಂಕುಚಿತ ಚಿಂತನೆಯೇ ಮರಣ. ಪ್ರೀತಿಯೇ ಜೀವನ. ದ್ವೇಷವೇ ಮರಣ.

3) ಪ್ರತಿದಿನ ನಿನ್ನೊಳಗೆ ಒಮ್ಮೆಯಾದರೂ ಮಾತಾಡದಿದ್ದರೆ ನೀನು ಒಬ್ಬ ಅದ್ಭುತ ಗೆಳೆಯನನ್ನು ಕಳೆದುಕೊಳ್ಳುವೆ.

4) ಹಳೆಯ ಧರ್ಮದ ಪ್ರಕಾರ ದೇವರನ್ನು ನಂಬದವ ನಾಸ್ತಿಕ. ಆಧುನಿಕ ಧರ್ಮದ ಪ್ರಕಾರ ತನ್ನ ಮೇಲೆ ನಂಬಿಕೆ ಇಲ್ಲದವನು ನಾಸ್ತಿಕ.

5) ನಿನ್ನ ಜೀವನದಲ್ಲಿ ಒಂದು ದಿನ ಯಾವುದೇ ಸಮಸ್ಯೆ ಬಂದಿಲ್ಲ ಎಂದಾದರೆ ನೀನು ತಪ್ಪು ದಾರಿಯಲ್ಲಿ ನಡೆಯುತ್ತಿರುವೆ ಎಂದರ್ಥ.

6) ಹೃದಯ ಮತ್ತು ಮಿದುಳು ಇವುಗಳಲ್ಲಿ ನೀನು ಒಂದನ್ನು ಆರಿಸುವ ಪ್ರಸಂಗ ಬಂತು ಅಂದರೆ ಖಂಡಿತವಾಗಿಯೂ ಹೃದಯವನ್ನು ಅನುಸರಿಸು.

7) ನಾವು ನಮ್ಮ ಚಿಂತನೆಗಳ ಮೊತ್ತವೇ ಆಗಿದ್ದೇವೆ.

8) ನೀನು ನಿನ್ನನ್ನು ನಂಬದ ಹೊರತು ದೇವರನ್ನು ನಂಬಲು ಸಾಧ್ಯವೇ ಇಲ್ಲ.

9) ನಿನ್ನ ಆತ್ಮಕ್ಕಿಂತ ಉತ್ತಮ ಶಿಕ್ಷಕ ಇಲ್ಲ.

10) ಪ್ರೀತಿಯಲ್ಲಿ ಹೆದರಿಕೆ ಇರುವುದಿಲ್ಲ. ಭಯ ಇದ್ದರೆ ಅದು ಪ್ರೀತಿಯೇ ಅಲ್ಲ.

11) ನಿನಗೆ ಮರ್ಯಾದೆ ಸಿಗದ ಕಡೆ ನಿನ್ನ ಹಳೆಯ ಚಪ್ಪಲಿ ಕೂಡ ಬಿಡಬೇಡ.

12) ಒಬ್ಬ ಪರಿಪೂರ್ಣ ನಿಸ್ವಾರ್ಥಿ ವ್ಯಕ್ತಿ ಜೀವನದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿ ಆಗಿರುತ್ತಾನೆ.

13) ನೀನು ಸತ್ಯವನ್ನು ಸಾವಿರ ಸಾವಿರ ರೀತಿಯಿಂದ ಹೇಳಬಹುದು. ಆದರೆ ಅವೆಲ್ಲವೂ ಸತ್ಯವೇ ಆಗಿರುತ್ತವೆ.

14) ನೀನು ಬೇರೆಯವರನ್ನು ಲೀಡ್ ಮಾಡುವಾಗ ಸೇವಕನಾಗಿ ಇರು. ನಿಸ್ವಾರ್ಥ ಮತ್ತು ತಾಳ್ಮೆ ನಿನ್ನ ವಿಜಯದ ಮೆಟ್ಟಿಲುಗಳು.

ವಿವೇಕಾನಂದರ ತತ್ವಗಳು ನಮ್ಮಲ್ಲಿ ಹೊಸ ಹುರುಪನ್ನು ತುಂಬಲಿ ಅನ್ನುವುದು ಆಶಯ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top