ಮೃತರ ಸಂಖ್ಯೆ 16ಕ್ಕೇರಿಕೆ ; ಬೆಂಕಿ ಇನ್ನಷ್ಟು ತೀವ್ರಗೊಳ್ಳುವ ಭೀತಿ
ವಾಷಿಂಗ್ಟನ್ : ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಜ.7ರಂದು ಕಾಣಿಸಿಕೊಂಡಿರುವ ವಿನಾಶಕಾರಿ ಕಾಳ್ಗಿಚ್ಚು ಇನ್ನೂ ಶಮನಗೊಂಡಿಲ್ಲ. ಗಾಳಿಯ ಕಾರಣದಿಂದ ಹರಡುತ್ತಿರುವ ಭೀಕರ ಬೆಂಕಿಯ ಜ್ವಾಲೆ ಇಷ್ಟರ ತನಕ 12,000ಕ್ಕೂ ಅಧಿಕ ಕಟ್ಟಡಗಳನ್ನು ಆಪೋಶನ ತೆಗೆದುಕೊಂಡಿದೆ ಹಾಗೂ ಬಲಿಯಾದವರ ಸಂಖ್ಯೆ 16ಕ್ಕೇರಿದೆ. ಓರ್ವ ಹಾಲಿವುಡ್ ನಟ ಕೂಡ ಕಾಳ್ಗಿಚ್ಚಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಾವಿರಾರು ಸಿಬ್ಬಂದಿ ಅಗ್ನಿಯನ್ನು ನಿಯಂತ್ರಣಕ್ಕೆ ತರಲು ಹೋರಾಡುತ್ತಿದ್ದರೂ ಬಲವಾಗಿ ಬೀಸುತ್ತಿರುವ ಗಾಳಿ ಅವರ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಗಾಳಿ ಇನ್ನಷ್ಟು ಬಲವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬೆಂಕಿ ಇನ್ನಷ್ಟು ತೀವ್ರಗೊಳ್ಳುವ ಭೀತಿ ಉಂಟಾಗಿದೆ.
ಸಾವಿರಾರು ಎಕರೆ ಪ್ರದೇಶವನ್ನು ವ್ಯಾಪಿಸಿರುವ ಬೆಂಕಿಯಿಂದಾಗಿ ಈಗಾಗಲೇ 2 ಲಕ್ಷದಷ್ಟು ಜನರು ಸಂತ್ರಸ್ತರಾಗಿದ್ದಾರೆ. 1.5 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿರಾರು ಮಂದಿ ಮನೆಮಠ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಂತಾಗಿದ್ದಾರೆ. ಸುಮಾರು 39,000 ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಧಗಧಗಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಬೆಂಕಿಯಲ್ಲಿ 16 ಮಂದಿ ಜೀವಂತ ದಹನವಾಗಿದ್ದಾರೆ ಮತ್ತು 13 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಾರು ಮನೆಗಳು ಸುಟ್ಟುಹೋಗಿವೆ. ಹಾಲಿವುಡ್‌ನ ಅನೇಕ ತಾರೆಯರು ಮತ್ತು ಸೆಲೆಬ್ರಿಟಿಗಳು ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬೆಂಕಿ ನೆರೆಯ ಸ್ಯಾನ್ ಫರ್ನಾಂಡೊ ವ್ಯಾಲಿ ಮತ್ತು ಬ್ರೆಂಟ್‌ವುಡ್‌ಗೂ ವ್ಯಾಪಿಸುವ ಭೀತಿ ತಲೆದೋರಿದ್ದು, ಈ ಪ್ರದೇಶದಲ್ಲಿ ಜನಪ್ರಿಯ ನಟ ಹಾಗೂ ಮಾಜಿ ಮೇಯರ್ ಅರ್ನಾಲ್ಡ್ ಶ್ವಾರ್ನಗರ್ ಸಹಿತ ಅನೇಕ ಗಣ್ಯರು ವಾಸವಾಗಿದ್ದಾರೆ. ಇನ್ನೂ ಸುಮಾರು 56 ಸಾವಿರ ಕಟ್ಟಡಗಳು ಅಪಾಯದಲ್ಲಿವೆ ಹಾಗೂ 1.66 ಲಕ್ಷ ಜನರನ್ನು ಸ್ಥಳಖಾಂತರ ಮಾಡಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.