ಕಾಣಿಯೂರು: ಮೊಳಹಳ್ಳಿ ಶಿವರಾಯರ ದೂದೃಷ್ಠಿಯ ಫಲವಾಗಿ ಇಂದು ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವೆಯಿಂದ ಗಟ್ಟಿಯಾಗಿ ನೆಲೆಯೂರಿ ಜಿಲ್ಲೆಯನ್ನು ಮುಂದುವರಿದ ಜಿಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶನಿವಾರ ಕಾಣಿಯೂರಿನಲ್ಲಿ ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆಯ ಸಲುವಾಗಿ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಸಿ ಮಾತನಾಡಿದರು.
ಬ್ರಿಟೀಷರ ಆಳ್ವಿಕೆಯ ಕಾಲಘಟ್ಟದಲ್ಲಿ ದೇಶದಲ್ಲಿ ಆರ್ಥಿಕ ಚಿಂತನೆಗಳೇ ಇಲ್ಲದ , ಸಹಕಾರಿ ವೈವಸ್ಥೆಯೇ ಇಲ್ಲದ, ಆಧುಕಿನಕತೆ, ಮೂಲಭೂತ ಸೌಕರ್ಯಗಳ ಲವಲೇಶವೂ ಇಲ್ಲದ , ರೈತರ ಬದುಕು ಹಸನಾಗಬಹುದು ಎನ್ನುವ ಕಲ್ಪನೆಯೇ ಇಲ್ಲದ ಕಾಲದಲ್ಲಿ ಚಾರ್ವಾಕದ ಒಂದು ಗ್ರಾಮೀಣ ಪ್ರದೇಶದಲ್ಲಿ ಕುಕ್ಕಪ್ಪ ಗೌಡ ಮತ್ತು ಚಿಕ್ಕಣ್ಣ ಗೌಡ ಅವರ ಮುತುವರ್ಜಿಯಲ್ಲಿ ಸಂಘ ಪ್ರಾರಂಭವಾಯಿತು ಎನ್ನುವದೇ ಅದ್ಬುತ ಕಲ್ಪನೆಯಾಗಿದೆ, ಇಂತಹ ಹಿರಿಯರ ನೇತೃತ್ವ ಮತ್ತು ದೂರದೃಷ್ಟಿತ್ವ ಸಹಕಾರಿ ಕ್ಷೇತ್ರಕ್ಕೆ ಬದ್ರಭುನಾದಿ ಹಾಕಿಕೊಟ್ಟಿದೆ. ಒಂದು ಪರಿವರ್ತನೆ ಮೂಲಕ ರೈತರಿಗೆ ಕೃಷಿ ಆಧಾರ ಬದುಕನ್ನು ನೀಡಿ ಆರ್ಥಿಕ ಸದೃಡತೆ ನೀಡಿದೆ ಎಂದು ಹೇಳಿದ ನಳಿನ್ ಕುಮಾರ್ ಗಣೇಶ್ ಅವರ ನೇತೃತ್ವದಲ್ಲಿ ಸಂಘದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಇಂದು ಕ್ಯಾಂಪ್ಕೋ ಸಂಸ್ಥೆ ಇಲ್ಲದಿದ್ದರೆ ಅಡಕೆ ಬೆಳೆಗಾರರ ಬದುಕು ಅತಂತ್ರವಾಗುತ್ತಿತ್ತು. ಸಹಕಾರಿ ಸಂಘಗಳು ರೈತರಿಗೆ ಆರ್ಥಿಕ ಸ್ವಾವಲಂಬನೆ ಗಾಗೂ ಸದೃಢತೆಯನ್ನು ನೀಡಿದರೆ ಕ್ಯಾಂಪ್ಕೋ ಅಡಕೆ ಕೃಷಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಬೆಂಬಲ ನೀಡುತ್ತಿದೆ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಡಕೆ ಖರೀದಿ ಕೇಂದ್ರ ತೆರೆಯಲು ಸಂಸ್ಥೆಯೊಂದಿಗೆ ಚರ್ಚಿಸಲಾಗುವುದು ಎಂದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಜೋಡೆತ್ತಿನಂತೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಘ ಅಭ್ಯುದಯವಾಗಲು ಸಾಧ್ಯ, ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿ ಪ್ರಾಮಾಣಿಕತೆಯಿಂದ ಸೇವೆ ನೀಡುತ್ತಾ ಬಂದಿರುವುದರಿಂದ ಅವುಗಳ ಸ್ಥಿಗತಿ ಮೇಲಕ್ಕೇರುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕೆಳಕ್ಕೆ ಇಳಿಯುತ್ತಿವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಹಿಂಗಾರ ಅರಳಿಸುವ ಮೂಲಕ ಕೃಷಿಮಳಿಗೆಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶ್ರೀಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್ ಗೌಡ ಅರುವಗುತ್ತು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ, ಪುತ್ತೂರು ನೋಟರಿ ನ್ಯಾಯವಾದಿ ಶಿವಪ್ರಸಾದ್ ಇ., ಪುತ್ತೂರು ತಾಲೂಕು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮೊಕ್ತೇಸರ ರೋಹಿತ್ ಗೌಡ ಅನಿಲ, ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಧಮೇಂದ್ರ ಕಟ್ಟತ್ತಾರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಉಪಾಧ್ಯಕ್ಷರುಗಳನ್ನು, ಮಾಜಿ ನಿರ್ದೇಶಕರುಗಳನ್ನು, ನಾಟಿ ವೈದ್ಯರನ್ನು, ಸಾಧಕ ವಿದ್ಯಾರ್ಥಿಗಳನ್ನು, ಸಂಘಕ್ಕೆ ಸ್ಥಳದಾನ ಮಾಡಿದ ಗಣ್ಯರನ್ನು, ಕ್ರೀಡಾಕ್ಷೇತ್ರದಲ್ಲಿನ ಸಾಧಕರನ್ನು . ಕಾರ್ಯಕ್ರಮದ ಪ್ರಾಯೋಜಕರನ್ನು ಸನ್ಮಾನಿಸಿ ಗೌರವಿಸಲಾಯಿತು
ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪಿ. ವಂದಿಸಿದರು. ವಸಂತ ಗೌಡ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.