ಉಪ್ಪಿನಂಗಡಿ : ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಋಣದಿಂದ ಮುಕ್ತರಾಗುವುದಲ್ಲದೆ ಒಂಟಿತನದಿಂದ ಹೊರಬರಲು ಹಿರಿಯರಿಗೆ ಸಹಾಯಕವಾಗುತ್ತದೆಯೆಂದು ನಿವೃತ್ತ ಭೂ ಸೇನಾ ಕಮಾಂಡೆಂಟ್, ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಸಂಸ್ಥೆಯ ಮಾಲಕ ಡಿ. ಚಂದಪ್ಪ ಮೂಲ್ಯ ತಿಳಿಸಿದರು.
ಉಪ್ಪಿನಂಗಡಿ ಪಂಜಳದ ವಿರಾಮದ ಮನೆಯಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ. ರಿ ಮೆಲ್ಕಾರು ಇದರ ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅತಿಥ್ಯವನ್ನು ವಹಿಸಿದ್ದ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ ಸೇವಾ ಕಾರ್ಯವು ವೈಯಕ್ತಿಕ ನೆಲೆಯಿಂದ ಆರಂಭವಾಗಿ ಕೌಟುಂಬಿಕ ಮತ್ತು ಸಾಮಾಜಿಕವಾಗಿ ವಿಸ್ತಾರ ಗೊಳ್ಳುತ್ತದೆ. ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಪ್ರತಿಯೊಬ್ಬರೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವದ ದಾನಿಗಳನ್ನು ಸ್ಮರಿಸಿ ಜನವರಿ 26ರಂದು ವಿಷ್ಣು ಸಹಸ್ರನಾಮ ಪಠಣ ಅಭಿಯಾನದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ತಿಳಿಸಿದರು.
ಪ್ರತಿಷ್ಠಾನದ ತಾಲೂಕು ಘಟಕಗಳಿಗೆ ಕೇಂದ್ರ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಸಕ್ರಿಯಗೊಳಿಸುವ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು.
ಕೇಂದ್ರ ಸಮಿತಿ ಪುತ್ತೂರು ಬಂಟ್ವಾಳ,ಬೆಳ್ತಂಗಡಿ ಘಟಕದ ಪದಾಧಿಕಾರಿಗಳಾದ ಕೃಷ್ಣಶರ್ಮ ಅನಾರು, ಗುಂಡ್ಯಡ್ಕ ಈಶ್ವರ ಭಟ್, ಸುಬ್ರಾಯ ರಾಮ ಮಡಿವಾಳ ಬಿ. ಸಿ ರೋಡ್, ಡಾ. ಬಿ ಎನ್ ಮಹಾಲಿಂಗ ಭಟ್, ಉಮೇಶ ಶೆಣೈ ಉಪ್ಪಿನಂಗಡಿ, ಚಂದ್ರಶೇಖರ ಆಳ್ವ ಪಡುಮಲೆ, ರೋಹಿತ್ ಮಂಚಿ ಉಪಸ್ಥಿತರಿದ್ದರು.
ಡಾ.ವಾರಿಜಾ ದೇವಿ ನೀರ್ಬೈಲು ಪ್ರಾರ್ಥಿಸಿ , ವಿಷ್ಣು ಸಹಸ್ರನಾಮ ಪಠಣದ ಪ್ರಯೋಜನವನ್ನು ತಿಳಿಸಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ, ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.