ಬೆಂಗಳೂರು: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಐವರು ಆರೋಪಿಗಳನ್ನು ಬೀದರ್ನ ಜೆಎಂಎಫ್ಸಿ ನ್ಯಾಯಾಲಯ 5 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ರಾಜು ಕಪನೂರ್, ಗೋರಕ್ನಾಥ್, ಸತೀಶ್, ನಂದಕುಮಾರ್ ನಾಗಭುಂಜಗೆ, ರಾಮಾಗೌಡ ಪಾಟೀಲ್ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು, ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ.
2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ ವೃತ್ತದ ಬಳಿಯ ರೈಲು ಹಳಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಮಾರು 7 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದರು. ಡೆತ್ನೋಟ್ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಜ್ ಖರ್ಗೆ ಆಪ್ತ ರಾಜು ಕಪನೂರ್ ಆ್ಯಂಡ್ ಗ್ಯಾಂಗ್ನ ಎಂಟು ಸದಸ್ಯರ ಹೆಸರು ಇತ್ತು. ಈ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಸರಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿ ಡಿವೈಸ್ ಎಸ್ಪಿ ಸುಲೇಮಾನ್ ತಹಶಿಲ್ದಾರ್ ನೆತೃತ್ವದ ಅಧಿಕಾರಿಗಳ ತಂಡ ಬೀದರ್ನಲ್ಲಿ ಬೀಡು ಬಿಟ್ಟು ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.
ಡೆತ್ನೋಟ್ನಲ್ಲಿ ಬರೆಯಲಾಗಿದ್ದ ಎಂಟೂ ಜನರಿಗೆ ಸಿಐಡಿ ಜನವರಿ 6 ರಂದು ನೋಟಿಸ್ ನೀಡಿತ್ತು. ಎಂಟು ಜನರ ಪೈಕಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು, ಗೋರಕನಾಥ್, ನಂದಕುಮಾರ್ ನಾಗಭುಂಜಗೆ, ರಾಮನಗೌಡಾ ಪಾಟೀಲ್, ಸತೀಶ್ ಐದು ಮಂದಿ ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾದರು. ಈ ವೇಳೆ ಸಿಐಡಿ ಐದೂ ಮಂದಿಯನ್ನು ಬಂಧಿಸಿದೆ.
ಗುತ್ತಿಗೆದಾರ ಆತ್ಮಹತ್ಯೆ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು ಸಿಐಡಿ ಕಸ್ಟಡಿಗೆ
