ಹಾಲಿವುಡ್ ತಾರೆಯರ, ಸೆಲೆಬ್ರಿಟಿಗಳ ಬಂಗಲೆಗಳ ಸಹಿತ 5000 ಕಟ್ಟಡಗಳು ಸುಟ್ಟು ಕರಕಲು
ವಾಷಿಂಗ್ಟನ್ : ಅಮೆರಿಕದ ಲಾಸ್ ಏಂಜೆಲ್ಸ್‌ನಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು ಸುಮಾರು 70 ಚದರ ಕಿಲೋಮೀಟರ್ ವ್ಯಾಪಿಸಿದ್ದು, ಸಾವಿರಾರು ಕಟ್ಟಡಗಳನ್ನು ಆಪೋಶನ ತೆಗೆದುಕೊಂಡಿದೆ ಹಾಗೂ ಮೃತರ ಸಂಖ್ಯೆ 10ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5000ಕ್ಕೂ ಅಧಿಕ ಕಟ್ಟಡಗಳು ಬೆಂಕಿಗಾಹುತಿಯಾಗಿದ್ದು, ಅನೇಕ ಹಾಲಿವುಡ್ ನಟಿ, ನಟಿಯರು ಹಾಗೂ ಸೆಲೆಬ್ರಿಟಿಗಳ ಮನೆಗಳು ಕೂಡ ಸುಟ್ಟು ಕರಕಲಾಗಿವೆ.
ಗಾಳಿಯಿಂದಾಗಿ ಬೆಂಕಿ ಕೆನ್ನಾಲೆಗಳು ಧಗದಗಿಸುತ್ತಾ ವ್ಯಾಪಿಸುತ್ತಿದ್ದು, ಬಲವಾದ ಗಾಳಿ ಬೀಸುತ್ತಿರುವುದರಿಂದ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಜ್ವಾಲೆಗಳು ಕೆಂಡಕಾರುತ್ತಿವೆ. ಹತ್ತಾರು ಹೆಲಿಕಾಪ್ಟರ್‌ಗಳನ್ನು ಬಳಸಿದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಇದು ಅಮೆರಿಕದ ಇತಿಹಾಸದಲ್ಲೇ ಅತಿ ಭೀಕರವಾದ ಕಾಡ್ಗಿಚ್ಚು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶುಕ್ರವಾರಕ್ಕಾಗುವಾಗ 1.80 ಲಕ್ಷ ಜನರನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಗಣ್ಯರು ಮತ್ತು ಸೆಲೆಬ್ರಿಟಿಗಳು ವಾಸವಾಗಿರುವ ಕ್ಯಾಲಬಸ್, ಸೈಂಟ್ ಮೋನಿಕಾ, ವೆಸ್ಟ್ ಹಿಲ್ಸ್‌ನಂಥ ಪ್ರದೇಶಗಳಿಗೂ ಕಾಡ್ಗಿಚ್ಚು ವ್ಯಾಪಿಸಿದೆ. ಪರಿಣಾಮವಾಗಿ ಮಾರ್ಕ್ ಹ್ಯಾಮಿಲ್, ಮ್ಯಾಂಡಿ ಮೂರೆ, ಪ್ಯಾರಿಸ್ ಹಿಲ್ಟನ್ ಅವರಂಥಹ ಹಲವು ಸುಪ್ರಸಿದ್ಧ ತಾರೆಯರು ಮನೆಗಳನ್ನು ಕಳೆದುಕೊಂಡಿದ್ದಾರೆ.
7500ಕ್ಕೂ ಅಧಿಕ ಸಿಬ್ಬಂದಿ ಅಗ್ನಿಶಮನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಯಾಲಿಫೋರ್ನಿಯ ಮತ್ತಿತರೆಡೆಗಳಿಂದ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ತರಿಸಿಕೊಳ್ಳಲಾಗಿದೆ. 150 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.