ನಿತ್ಯ 40 ಕೌಂಟರ್ಗಳಲ್ಲಿ 1 ಲಕ್ಷ ಜನರಿಗೆ ಊಟ
ಪ್ರಯಾಗ್ರಾಜ್: ಜನವರಿ 13ರಿಂದ ಪ್ರಯಾಗ್ರಾಜ್ನಲ್ಲಿ ಪ್ರಾರಂಭವಾಗಲಿರುವ ಮಹಾಕುಂಭಮೇಳದಲ್ಲಿ ಅದಾನಿ ಸಮೂಹ ಇಸ್ಕಾನ್ ಸಹಭಾಗಿತ್ವದಲ್ಲಿ ಬರೋಬ್ಬರಿ 50 ಲಕ್ಷ ಜನರಿಗೆ ಅನ್ನದಾನ ಸೇವೆ ನೀಡಲಿದೆ. ಮಹಾಕುಂಭಮೇಳದಲ್ಲಿ ಭಕ್ತರಿಗೆ ಅನ್ನದಾನ ಮಾಡಲು ಅದಾನಿ ಗ್ರೂಪ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಕೈಜೋಡಿಸಿವೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಮಹಾಕುಂಭಮೇಳ ಪೂರ್ತಿ ಈ ಮಹಾಅನ್ನಪ್ರಸಾದ ಸೇವೆ ನೀಡಲಾಗುತ್ತದೆ.
ನಿತ್ಯ 1 ಲಕ್ಷ ಭಕ್ತರಂತೆ 50 ದಿನಗಳಲ್ಲಿ 50 ಲಕ್ಷ ಭಕ್ತರಿಗೆ ಮಹಾಪ್ರಸಾದ ಸೇವೆ ನೀಡಲಾಗುವುದು. ಮಹಾಕುಂಭಮೇಳದ ಸ್ಥಳದಲ್ಲಿ ಎರಡು ಅತ್ಯಾಧುನಿಕ ಅಡುಗೆ ಶಾಲೆಗಳನ್ನು ಇದಕ್ಕಾಗಿ ಸಜ್ಜುಗೊಳಿಸಲಾಗಿದ್ದು, ಅನ್ನಪ್ರಸಾದವನ್ನು ಎಲೆಗಳಿಂದ ಮಾಡಿದ ಪರಿಸರ ಸ್ನೇಹಿ ತಟ್ಟೆಗಳಲ್ಲಿ ವಿತರಿಸಲಾಗುವುದು. ಚಪಾತಿ, ಅನ್ನ, ದಾಲ್, ಪಲ್ಯ ಮತ್ತು ಸಿಹಿತಿಂಡಿ ಇರುವ ಮಹಾಅನ್ನಪ್ರಸಾದವನ್ನು ಮಹಾಕುಂಭದ ಜನ ಸೇರುವ 40 ಸ್ಥಳಗಳಲ್ಲಿ ವಿತರಿಸಲಾಗುವುದು. 2,500 ಸ್ವಯಂಸೇವಕರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ವಿಕಲಚೇತನರು, ವೃದ್ಧರು ಮತ್ತು ಮಕ್ಕಳಿರುವ ತಾಯಂದಿರಿಗಾಗಿ ಗಾಲ್ಫ್ ಬಂಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಇಸ್ಕಾನ್ ಗೀತಾಸಾರದ 5 ಲಕ್ಷ ಪ್ರತಿಗಳನ್ನು ಭಕ್ತರಿಗೆ ವಿತರಿಸಲಿದೆ.
ಮಹಾಪ್ರಸಾದ ಸೇವೆಯನ್ನು ನೀಡುವಲ್ಲಿ ಇಸ್ಕಾನ್ ನೀಡುತ್ತಿರುವ ಬೆಂಬಲದ ಬಗ್ಗೆ ಮಾತನಾಡಿದ ಗೌತಮ್ ಅದಾನಿ, ಮಹಾಕುಂಭಮೇಳ ಪವಿತ್ರವಾದ ಸೇವಾ ಸ್ಥಳವಾಗಿದ್ದು, ಅಲ್ಲಿ ಪ್ರತಿಯೊಬ್ಬ ಭಕ್ತರೂ ದೇವರಿಗೆ ಸೇವೆ ಸಲ್ಲಿಸಲು ತೊಡಗಿಸಿಕೊಳ್ಳುತ್ತಾರೆ. ಇಸ್ಕಾನ್ ಸಹಯೋಗದೊಂದಿಗೆ ಮಹಾಕುಂಭದಲ್ಲಿ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.
ಮಾತಾ ಅನ್ನಪೂರ್ಣೆಯ ಆಶೀರ್ವಾದದಿಂದ ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ಒದಗಿಸಲಾಗುವುದು. ನಿಜವಾದ ಅರ್ಥದಲ್ಲಿ ಈ ಸೇವೆಯು ದೇಶಭಕ್ತಿಯ ಅತ್ಯುನ್ನತ ರೂಪವಾಗಿದೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು ಎಂದು ಗೌತಮ್ ಅದಾನಿ ಹೇಳಿದ್ದಾರೆ.