ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ಗಳನ್ನು ಹಾಕಿ ವರ್ಷದಿಂದ ಕಿರುಕುಳ
ತಿರುವನಂತಪುರಂ: ಮಲಯಾಳಂ ನಟಿ ಹನಿರೋಸ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ವಯನಾಡಿನಿಂದ ಚೆಮ್ಮನೂರ್ ಅವರನ್ನು ಬಂಧಿಸಿ ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್‌ಗಳನ್ನು ಮಾಡಿದ ಕುರಿತು ಬಾಬಿ ಚೆಮ್ಮನ್ನೂರು ಸಹಿತ 30 ಮಂದಿಯ ವಿರುದ್ಧ ಹನಿರೋಸ್ ಸೋಮವಾರ ದೂರು ನೀಡಿದ್ದರು. ಆ ಪ್ರಕಾರ ಮಂಗಳವಾರ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಬುಧವಾರ ವಯನಾಡಿನಲ್ಲಿರುವ ಬಾಬಿ ಚೆಮ್ಮನ್ನೂರು ಅವರ ರೆಸಾರ್ಟ್‌ನಿಂದಲೇ ಅವರನ್ನು ಬಂಧಿಸಿದ್ದಾರೆ.
ಕಣ್ಣೂರಿನಲ್ಲಿ ಚಿನ್ನದಂಗಡಿಯ ಉದ್ಘಾಟನಾ ಸಮಾರಂಭವೊಂದರಲ್ಲಿ ಬಾಬಿ ಚೆಮ್ಮನ್ನೂರು ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವರ ಮಾತುಗಳು ದ್ವಂದ್ವಾರ್ಥದಿಂದ ಕೂಡಿದ್ದವು. ಇನ್ನೊಂದು ಕಾರ್ಯಕ್ರಮದಲ್ಲೂ ತನ್ನ ಬಗ್ಗೆ ಅಸಭ್ಯ ಮಾತುಗಳನ್ನು ಹೇಳಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಗ್ಗೆ ತೀರಾ ಲೈಂಗಿಕ ಕಮೇಂಟ್‌ಗಳನ್ನು ಹಾಕಿದ್ದಾರೆ ಎಂದು ಹನಿರೋಸ್ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಇಂಥ ಕಮೆಂಟ್‌ಗಳು ಮತ್ತು ವರ್ತನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹೀಗಾಗಿ ಅಂಥವರ ವಿರುದ್ಧ ಸಮರವನ್ನೇ ಸಾರಬೇಕಾಯಿತು. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ತನಕ ಬಿಡುವುದಿಲ್ಲ ಎಂದು ಹನಿರೋಸ್ ಹೇಳಿದ್ದಾರೆ. ಹನಿರೋಸ್ ಮಲಯಾಳಂ, ತಮಿಳು ಮತ್ತು ತೆಲುಗಿನ ಜನಪ್ರಿಯ ನಟಿಯಾಗಿದ್ದು, ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.