ಸಾವಿರಕ್ಕೂ ಅಧಿಕ ಕಟ್ಟಡ ಬೆಂಕಿಗಾಹುತಿ; 1 ಲಕ್ಷ ಮಂದಿ ಸ್ಥಳಾಂತರ
ವಾಷಿಂಗ್ಟನ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ನಗರ ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಬೆಂಕಿ ನಿಯಂತ್ರಿಸಲು ಸರಕಾರ ಹರಸಾಹಸ ಪಡುತ್ತಿದೆ. ಇಷ್ಟರತನಕ ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ. ಅಪಾರ ಪ್ರಮಾಣದ ಅರಣ್ಯ ಮತ್ತು ಸೊತ್ತು ನಾಶವಾಗಿದೆ.
15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿಹೊತ್ತಿ ಉರಿಯುತ್ತಿದೆ. 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ.
ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದ ಕಾಡ್ಗಿಚ್ಚು ಮಂಗಳವಾರದ ವೇಳೆಗೆ ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿತ್ತು. ಈ ವೇಳೆ ಚಂಡಮಾರುತ ಬೀಸಿದ್ದರಿಂದ ಬೆಂಕಿ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸಿತು ಎಂದು ವರದಿ ಹೇಳಿದೆ.