ಬಾಟಲಿಗೆ 20-50 ರೂ. ತನಕ ಏರಿಕೆ; ಜ.20ರಿಂದ ಜಾರಿ
ಬೆಂಗಳೂರು: ಮದ್ಯಪ್ರಿಯರಿಗೆ ಸರಕಾರ ಮತ್ತೊಮ್ಮೆ ಬರೆ ಎಳೆದಿದೆ. ಬಿಯರ್ ಬೆಲೆಯನ್ನು ಏರಿಸಲು ತೀರ್ಮಾನಿಸಿದ್ದು, ಬಜೆಟ್ ಮಂಡನೆಗೂ ಮುಂಚಿತವಾಗಿ ಈ ಏರಿಕೆ ಜಾರಿಯಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರಕಾರ ಬಜೆಟ್‌ಗೆ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ. ಜ.20ರಿಂದಲೇ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ.
ಕಾಂಗ್ರೆಸ್ ಸರಕಾರ ಬಂದ ಮೇಲೆ ಗ್ಯಾರಂಟಿ ಕೊಡುಗೆಗಳಿಗೆ ಹಣ ಹೊಂದಿಸುವ ಸಲುವಾಗಿ ಪದೇಪದೆ ಮದ್ಯದ ಬೆಲೆ ಏರಿಸುತ್ತಿದ್ದು, ಇದು ಮದ್ಯಪ್ರಿಯರಿಗೆ ಸಂಕಷ್ಟ ತಂದೊಡ್ಡಿದೆ. ಬೆಲೆ ಏರಿಕೆಯಿಂದಾಗಿ ಬಿಯರ್ ಮಾರಾಟ ಕುಸಿತ ಕಂಡು ಅಬಕಾರಿ ಉದ್ಯಮವೂ ಸಂಕಷ್ಟ ಎದುರಿಸುತ್ತಿದೆ.
ಈ ಸಲ ಪ್ರತಿ ಬಾಟಲಿಗೆ ಕನಿಷ್ಠ 20 ರಿಂದ 50 ರೂ.ವರೆಗೆ ಏರಿಕೆಯಾಗಲಿದೆ. ಬೆಲೆ ನಿಗದಿಪಡಿಸಲು ಬಿಯರ್‌ನ ಅಲ್ಕೋಹಾಲ್ ಪ್ರಮಾಣವನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಇದರಿಂದಾಗಿ ಲ್ಯಾಗರ್ ಬಿಯರ್ (ಕಡಿಮೆ ಆಲ್ಕೋಹಾಲ್ ಅಂಶವಿರುವ) ದರ ಬಹಳ ಹೆಚ್ಚಾಗುವುದಿಲ್ಲ. ಆದರೆ ಸ್ಟ್ರಾಂಗ್ ಬಿಯರ್‌ಗಳ ಬೆಲೆ ಭಾರಿ ಏರಿಕೆಯಾಗಲಿದೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆಯ ರಾಜ್ಯಗಳ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ ಬಿಯರ್ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ ಐಎಂಎಲ್ ದರ ಪರಿಷ್ಕರಿಸಲಾಗಿತ್ತು. ಆದರೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಅಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ಪರಿಷ್ಕರಿಸಲು ಕಳೆದ ಆಗಸ್ಟ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿತ್ತು. ಆಗಲೇ ಸುಂಕ ಏರಿಕೆ ಕಡತ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಲಾಗಿತ್ತು. ನಾನಾ ಕಾರಣಗಳಿಂದ ಆ ಕಡತಕ್ಕೆ ಸಿಎಂ ಸಹಿ ಹಾಕಿರಲಿಲ್ಲ. ಈಗ ಸಿಎಂ ಸುಂಕ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸರಕಾರ ಆದೇಶ ಹೊರಡಿಸಿದೆ.
ನಾಲ್ಕೈದು ತಿಂಗಳ ಹಿಂದೆಯೇ ಬಿಯರ್ ದರ ಪರಿಷ್ಕರಣೆಗೆ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ಆ ಪ್ರಸ್ತಾವಕ್ಕೆ ಈಗ ಸರಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಕೆಲ ಬಿಯರ್ ಬ್ರಾಂಡ್‌ಗಳ ಮೇಲೆ ಸುಂಕ ಏರಿಕೆಯಾಗಿ ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಹೇಳಿದ್ದಾರೆ.
ರಾಜ್ಯ ಸರಕಾರ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ಆದಾಯದ ಗುರಿ ನೀಡಲಾಗಿತ್ತು. 2024ರ ಡಿ.31ರವರೆಗೆ ಅಂದರೆ ಮೊದಲ 9 ತಿಂಗಳಲ್ಲಿ 23,733 ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ. ಇನ್ನುಳಿದ ಮೂರು ತಿಂಗಳಲ್ಲಿ ಸುಮಾರು 15 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಸವಾಲು ಅಬಕಾರಿ ಮುಂದಿದೆ. ಸದ್ಯದ ಸ್ಥಿತಿಯಲ್ಲಿ ಏಳು ಸಾವಿರ ಕೋಟಿ ರೂ. ಸಂಗ್ರಹವಷ್ಟೇ ಸಂಗ್ರಹವಾಗಬಹುದು. ಸುಮಾರು 7 ಸಾವಿರ ಕೋಟಿ ರೂ. ಆದಾಯ ಕೊರತೆ ಎದುರಿಸಬೇಕಾಗುತ್ತದೆ. ಅದೇ ಕಾರಣಕ್ಕಾಗಿ ಇದೀಗ ಬಿಯರ್ ಮೇಲಿನ ಸುಂಕ ಏರಿಕೆ ಮಾಡಲಾಗಿದೆ ಎನ್ನುತ್ತಾರೆ ಅಬಕಾರಿ ಉದ್ಯಮದವರು.