ಆರೋಗ್ಯ ಸಚಿವರ ಸಂಧಾನ ವಿಫಲ; ಕೊರೆವ ಚಳಿಯಲ್ಲೂ ಅಹೋರಾತ್ರಿ ಧರಣಿ
ಬೆಂಗಳೂರು: ಗೌರವ ಧನ ಏರಿಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿರಿಸಿದ್ದು, ನಗರದ ಕೊರೆವ ಚಳಿಯನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಮಕ್ಕಳೊಂದಿಗೆ ಧರಣಿ ಕುಳಿತಿದ್ದಾರೆ. ಗೌರವ ಧನ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ ಮಾಸಿಕ 8 ಸಾವಿರ ರೂ. ಗೌರವ ಧನವನ್ನು 9,500 ರೂಪಾಯಿಗೇರಿಸುವ ಪ್ರಸ್ತಾವ ಮಂಡಿಸಿಸದ್ದರು. ಆದರೆ ಇದಕ್ಕೊಪ್ಪದ ಆಶಾ ಕಾರ್ಯಕರ್ತೆಯರು ಕನಿಷ್ಠ 15 ಸಾವಿರ ರೂ. ಗೌರವಧನ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳು
- ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ಒಟ್ಟು 15,000 ಮಾಸಿಕ ಗೌರವಧನ ನೀಡಬೇಕು.
- ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2 ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಬೇಕು.
- ಆಶಾ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಹೊರಡಿಸಿದ ಅಧಿಕೃತ ಜ್ಞಾಪನಾ ಪತ್ರ ಕೂಡಲೇ ಹಿಂತೆಗೆದುಕೊಳ್ಳಬೇಕು.
- ಅಧಿಕೃತವಾಗಿ ಆಶಾ ಕಾರ್ಯಕರ್ತೆಯರದ್ದಲ್ಲದ ಕೆಲಸಗಳನ್ನು ಮಾಡಲು ಹೇಳಿರುವ ಆದೇಶ ವಾಪಸ್ ಪಡೆಯಬೇಕು.
- ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಿ ಅಥವಾ ಮೊಬೈಲ್ ಡೇಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಿ, ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ.
- ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ 5 ಲಕ್ಷ ರೂ.ಗೆ ಹೆಚ್ಚಿಸುವುದು.
- ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಮಾಮೂಲು ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
- ಆಶಾ ಸೇವೆಯಲ್ಲಿ ಇದ್ದಾಗ ಆಗುವ ಆನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು.
- ಎಲ್ಲ ಆಶಾ ಕಾರ್ಯಕರ್ತೆಯರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆ ಇದ್ದರೆ ಕೂಡಲೇ ಉಚಿತ ಚಿಕಿತ್ಸೆ ಮಾಡಬೇಕು.
- ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ಒದಗಿಸಬೇಕು.