ಸದ್ಯಕ್ಕೆ ಡಿನ್ನರ್ ಮೀಟಿಂಗ್ ನಡೆಸದಂತೆ ಸೂಚನೆ
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಗುಂಪು ರಾಜಕೀಯ ಜೋರಾಗಿದೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದಿದ್ದ ಡಿನ್ನರ್ ಮೀಟಿಂಗ್ ತೀವ್ರ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ ತನ್ನ ಶಕ್ತಿ ಪ್ರದರ್ಶಿಸಲು ಇಂದು ಡಿನ್ನರ್ ಸಭೆ ಕರೆದಿದ್ದರು. ಆದರೆ ಈ ಡಿನ್ನರ್ ಮೀಟಿಂಗ್‌ಗೆ ಹೈಕಮಾಂಡ್ ತಡೆ ಹಾಕಿದೆ.
ಎಸ್‌ಸಿ/ಎಸ್‌ಟಿ ಸಮುದಾಯದ ಕಾಂಗ್ರೆಸ್ ಮುಖಂಡರು, ಸಚಿವರು ಮತ್ತು ಶಾಸಕರ ಡಿನ್ನರ್ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ಸೂಚನೆಯ ಮೇರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದ್ದು, ಸಭೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರಮೇಶ್ವರ ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಚಿವರ, ಶಾಸಕರ ಡಿನ್ನರ್ ಮೀಟಿಂಗ್ ಸಂಚಲನ ಮೂಡಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸುಮಾರು 35 ಮಂದಿ ಸಚಿವರು ಮತ್ತು ಶಾಸಕರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಸಭೆ ಮಾಡಿದ್ದರು. ಇದು ಡಿಕೆಶಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಿಗೆ ಪರಮೇಶ್ವರ ಡಿನ್ನರ್ ಸಭೆ ಆಯೋಜಿಸಲು ನಿರ್ಧರಿಸಿದ್ದರು. ಇದನ್ನೀಗ ಮುಂದೂಡಲಾಗಿದೆ.
ವಿದೇಶದಿಂದ ವಾಪಸ್ ಬಂದ ಬಳಿಕ ಡಿ.ಕೆ.ಶಿವಕುಮಾರ್ ದಿಲ್ಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್ ಗೃಹ ಸಚಿವ ಪರಮೇಶ್ವರ ಅವರು ಕರೆದಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದೆ.