ಸುಳಿವಿಗಾಗಿ ತಡಕಾಡುತ್ತಿರುವ ಪೊಲೀಸರು
ವಿಟ್ಲ: ಇಲ್ಲಿಗೆ ಸಮೀಪದ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಿಂದ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣದ ಸುಳಿವಿಗಾಗಿ ಪೊಲೀಸರು ಇನ್ನೂ ತಡಕಾಡುತ್ತಿದ್ದಾರೆ. ಬಾಲಿವುಡ್‌ನ ಸ್ಪೆಷಲ್ 26 ಸಿನೆಮಾ ಮಾದರಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗು ಹಾಕಿಕೊಂಡು ಬಂದ ಆರು ಮಂದಿ ಚಾಲಾಕಿ ದರೋಡೆಕೋರರು ಸುಮಾರು ಎರಡೂವರೆ ತಾಸು ಇಡೀ ಮನೆಯನ್ನು ಜಾಲಾಡಿ ನಗದು ಹಣವನ್ನು ಮೂಟೆಕಟ್ಟಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ದರೋಡೆ ಕೃತ್ಯದ ಹಿನ್ನೆಲೆಯಲ್ಲಿ ಸುಲೈಮಾನ್ ಹಾಜಿಯ ಆಸ್ತಿಯ ಬಗ್ಗೆ ಪುಂಖಾನುಪುಂಖವಾಗಿ ವದಂತಿಗಳನ್ನು ತೇಲಿ ಬಿಡಲಾಗುತ್ತಿದೆ.
ದೂರಿನಲ್ಲಿ 30 ಲ.ರೂ. ಎನ್ನಲಾಗಿದ್ದರೂ ದರೋಡೆಯಾದ ಮೊತ್ತ ಇದರಿಂದ ಹಲವು ಪಟ್ಟು ಹೆಚ್ಚು ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ. ದರೋಡೆಕೋರರು ಐದು ಮೂಟೆಗಳಲ್ಲಿ ನಗದು ಸಾಗಿಸಿದ್ದಾರೆ. ಕೋಟಿಗಟ್ಟಲೆ ಹಣ ಮನೆಯಲ್ಲಿತ್ತು. ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇದ್ದರೂ ಕಾರಿನಲ್ಲಿ ಜಾಗ ಸಾಕಾಗದ ಕಾರಣ ಅವುಗಳನ್ನು ಬಿಟ್ಟು ಹೋಗಿದ್ದಾರೆ ಎಂದೆಲ್ಲ ಜನರಾಡಿಕೊಳ್ಳುತ್ತಿದ್ದಾರೆ.
ಆದರೆ ಸುಲೈಮಾನ್ ಹಾಜಿ ಈ ವದಂತಿಗಳನ್ನು ನಿರಾಕರಿಸಿದ್ದು, ಇಂಥ ವದಂತಿಗಳಿಂದ ತನ್ನ ಕುಟುಂಬಕ್ಕೆ ಸಮಸ್ಯೆಯಾಗುತ್ತಿದೆ. ವಿನಾಕಾರಣ ನಾವು ಜನರ ಮತ್ತು ಸರಕಾರದ ಗುಮಾನಿಗೆ ಈಡಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದರೋಡೆಕೋರರು ಬಂದಿದ್ದ ಎರ್ಟಿಗಾ ಕಾರು ಕೇರಳದ ಮುಳ್ಳೇರಿಯ ಪರಿಸರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ವದಂತಿ ನಿನ್ನೆ ಇಡೀ ದಿನ ಹರಡಿತ್ತು. ನಂತರ ಕಾರು ಪತ್ತೆಯಾಗಿಲ್ಲ, ಕೆಲವೊಂದು ಸುಳಿವುಗಳು ಮಾತ್ರ ಸಿಕ್ಕಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ತನಿಖೆಗೆ ನಾಲ್ಕು ತಂಡ
ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ನೇತೃತ್ವದಲ್ಲಿ ವಿಟ್ಲ ಠಾಣೆಯ ಪೋಲಿಸ್ ಇನ್‌ಸ್ಪೆಕ್ಟರ್ ನಾಗರಾಜ್ ಅವರ ಮುಂದಾಳತ್ವದಲ್ಲಿ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್, ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ, ವಿಟ್ಲ ಠಾಣೆಯ ಎಸ್.ಐ.ಕೌಶಿಕ್ ಅವರ ನಾಲ್ಕು ತಂಡಗಳು ರಚನೆಯಾಗಿದ್ದು, ಅದರಲ್ಲಿ ಪರಿಣಿತ ಸಿಬ್ಬಂದಿ ಇದ್ದಾರೆ. ಕಳೆದ ಮೂರು ದಿನಗಳಿಂದ ಬೇರೆ ರೀತಿಯಲ್ಲಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?
ಸಿಂಗಾರಿ ಬೀಡಿ ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ಕಳೆದ ಶುಕ್ರವಾರ ರಾತ್ರಿ ತಮಿಳುನಾಡು ನೋಂದಣಿಯ ಕಾರಿನಲ್ಲಿ ಕಾರು ಜನರ ತಂಡ ಆಗಮಿಸಿದೆ. ನಾವು ಇ.ಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ತಾಸು ತನಿಖೆ ನಡೆಸುವ ನಾಟಕವಾಡಿದ್ದರು. ಬಳಿಕ ಮನೆಯಲ್ಲಿ ಸಿಕ್ಕಿದ್ದ ನಗದು ಹಿಡಿದುಕೊಂಡು ಪರಾರಿಯಾಗಿದ್ದರು.
ಅನುಮಾನಗೊಂಡ ಸುಲೈಮಾನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತಂಡಕ್ಕೆ ಇದೊಂದು ಚಾಲೆಂಜಿಂಗ್ ಹಾಗೂ ಹೊಸ ರೀತಿಯ ಪ್ರಕರಣವಾಗಿದೆ. ದ.ಕ.ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಬಹುಶಃ ಇದೇ ಮೊದಲು.
ಭಾರಿ ಕುಳ ಸುಲೈಮಾನ್ ಹಾಜಿ
ಸುಲೈಮಾನ್ ಹಾಜಿ ಆಸ್ತಿಯ ಬಗ್ಗೆ ಉತ್ಪ್ರೇಕ್ಷಿತ ಮಾಹಿತಿಗಳು ಅನೇಕ ಹೊರಬರುತ್ತಿವೆ. ಆದರೆ ಅವರು ಗಟ್ಟಿಕುಳ ಎನ್ನುವುದರಲ್ಲಿ ಅನುಮಾನವಿಲ್ಲ. ಅವರಿಗೆ 80 ಎಕರೆ ಅಡಿಕೆ ತೋಟವೇ ಇದೆ. ಇತ್ತೀಚೆಗೆ ಕಟ್ಟಿಸಿದ ಅರಮನೆಯಂತಹ ಮನೆಯೇ ಅವರ ಸಂಪತ್ತಿಗೆ ಸಾಕ್ಷಿ ನುಡಿಯುತ್ತಿದೆ. ಕಡಿಮೆಯೆಂದರೂ 4 ಕೋ.ರೂ.ಯ ಮನೆ ಇದು ಎನ್ನಲಾಗುತ್ತಿದೆ. ಅನೇಕ ವರ್ಷಗಳಿಂದ ಬೀಡಿ ಉದ್ಯಮ ನಡೆಸುತ್ತಿರುವ ಸುಲೈಮಾನ್ ಹಾಜಿಯವರು ಊರಿಡೀ ಜಾಗ, ಕಟ್ಟಡ ಹೊಂದಿದ್ದಾರೆ. ದೊಡ್ಡ ಮೊತ್ತ ಪ್ರತಿತಿಂಗಳು ಬಾಡಿಗೆಯಾಗಿ ಬರುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.