ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ…

ಶರಣಾಗಲು ನಕ್ಸಲರು ಇಟ್ಟಿದ್ದಾರೆ ಬೇಡಿಕೆಗಳ ದೀರ್ಘ ಪಟ್ಟಿ

ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂ ಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆ…ಹೀಗೆ ಶರಣಾಗಲು ಬಯಸಿರುವ ನಕ್ಸಲರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಯಾವುದೇ ರೀತಿಯ ಒತ್ತಡ ಹೇರಬಾರದು. ಕೇಸ್‌ಗಳ ನೆಪದಲ್ಲಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಸಬಾರದು, ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಲು ವ್ಯವಸ್ಥೆ ಕಲ್ಪಿಸಬೇಕೆಂಬ ಕೋರಿಕೆಗಳು ನಕ್ಸಲರ ಬೇಡಿಕೆ ಪಟ್ಟಿಯಲ್ಲಿವೆ.

ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್​ ಪುನರ್ವಸತಿ ಸಮಿತಿ ಮುಂಡಗಾರು ಲತಾ ನೇತೃತ್ವದ ಆರು ಮಂದಿ ನಕ್ಸಲರ ಶರಣಾಗತಿಗೆ ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಸಮಿತಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್​ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂಧ್ರ ಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಒಟ್ಟು ಆರು ಜನ ನಕ್ಸಲ್​ರು ನಾಳೆಯೇ ಶರಣಾಗಲಿದ್ದಾರೆ ಎನ್ನಲಾಗಿದೆ. ಆದರೆ ಸರಕಾರ ಇನ್ನೂ ಈ ಶರಣಾಗತಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೆ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಗಳಿಗೆ ಬರೆಯುತ್ತಿದ್ದೇವೆ. ದೇಶದ ಇಂದಿನ ಸಂದರ್ಭ, ಚಳವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಟೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ ಎಂದು ಪತ್ರದಲ್ಲಿ ನಕ್ಸಲರು ಹೇಳಿದ್ದಾರೆ.































 
 

ನಾವು ಹೋರಾಟದ ಮಾರ್ಗವನ್ನು ಮಾತ್ರ ಬದಲಾಯಿಸಿದ್ದೇವೆ. ಆದರೆ ಜನಪರ ಹೋರಾಟವನ್ನು ಕೈ ಬಿಡುತ್ತಿಲ್ಲ. ಹೀಗಾಗಿ ಪ್ರಜಾತಾಂತ್ರಿಕ ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ್ಮ ಬದುಕನ್ನು ಜನತೆಗೆ ಮುಡಿಪಾಗಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ.
ನಾವು ಇಲ್ಲಿಂದ ಹೊರಬಂದು ಜೈಲುಗಳಲ್ಲಿ ಕೊಳೆಯುವ ಪರಿಸ್ಥಿತಿ ಎದುರಾಗಬಾರದು. ನಮ್ಮ ಮೇಲೆ ಹಾಕಿರುವ ಹೆಚ್ಚಿನ ಕೇಸುಗಳು ಸುಳ್ಳು ಕೇಸುಗಳಾಗಿವೆ. ನಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದ ಪ್ರಕರಣಗಳಲ್ಲಿ ನಮ್ಮ ಹೆಸರುಗಳನ್ನು ಸೇರಿಸಲಾಗಿದೆ. ಈ ಕೇಸುಗಳಿಂದ ನಮಗೆ ಮುಕ್ತಿ ಸಿಗಬೇಕು.
ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರ ಬರಲು ಸಹಕರಿಸಬೇಕು. ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು.
ಕೇಸುಗಳನ್ನು ನಡೆಸಲು ಕಾನೂನು ಹಾಗೂ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಈಗಾಗಲೇ ಮುಖ್ಯವಾಹಿನಿಗೆ ಬಂದ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸುಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೂ (ಅವರು ಬಂಧನಕ್ಕೊಳಗಾಗಿದ್ದರೂ ಸಹ) ಈ ಪ್ಯಾಕೇಜ್​ ಅನ್ವಯ ಆಗುವಂತೆ ಮಾಡಿ ಅವರ ಬಿಡುಗಡೆಗೆ ಸಹಕರಿಸಬೇಕು. ಹೊರಬಂದ ನಂತರ ನಮ್ಮ ಜೀವನಕ್ಕೆ ದಾರಿ ಏನು ಎಂಬ ಸ್ಪಷ್ಟತೆ ಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ನಕ್ಸಲರ ಬೇಡಿಕೆಯಂತೆ ನಕ್ಸಲ್ ವಿಕ್ರಂಗೌಡ ಎನ್​ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯದಲ್ಲಿ ನಕ್ಸಲ್​​ ವಿಕ್ರಂಗೌಡ ಎನ್​​​ಕೌಂಟರ್​​ ಆಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top