ಎಐ ಕ್ಯಾಮರಾ, ಫುಲ್‌ ಎಸಿ, ಡಿಜಿಟಲ್‌ ಸೂಚನಾ ಫಲಕ…

ಧರ್ಮಸ್ಥಳದಲ್ಲಿ ಇಂದು ಲೋಕಾರ್ಪಣೆಗೊಳ್ಳಲಿರುವ ಶ್ರೀ ಸಾನಿಧ್ಯ ಕಾಂಪ್ಲೆಕ್ಸ್‌ನಲ್ಲಿರುವ ವಿಶೇಷತೆಗಳ ಪೂರ್ಣ ಮಾಹಿತಿ ಇಲ್ಲಿದೆ

ಧರ್ಮಸ್ಥಳ : ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಇನ್ನು ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಕಾಯುವ ಕಷ್ಟ ತಪ್ಪಲಿದೆ. ಇಂದು ಲೋಕಾರ್ಪಣೆಗೊಳ್ಳಲಿರುವ ಶ್ರೀ ಸಾನಿಧ್ಯ ನಿರೀಕ್ಷಣಾ ಕಾಂಪ್ಲೆಕ್ಸ್‌ನಲ್ಲಿ ಭಕ್ತರು ಆರಾಮವಾಗಿ ಹೋಗಿ ಒಂದರಿಂದ ಒಂದೂವರೆ ತಾಸಿನೊಳಗೆ ದೇವರ ದರ್ಶನ ಮಾಡಿಕೊಂಡು ಬರಬಹುದು. ಭಕ್ತರಿಗೆ ಸರ್ವ ರೀತಿಯಲ್ಲೂ ಅನುಕೂಲವಾಗುವಂತೆ ಶ್ರೀ ಸಾನಿಧ್ಯವನ್ನು ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಶ್ರೀ ಸಾನಿಧ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕೆಲವೇ ದಿನಗಳಲ್ಲಿ ಇದು ಭಕ್ತರ ಬಳಕೆಗೆ ಸಿಗಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಶೇಷ ದಿನಗಳಲ್ಲಿ ವಿಪರೀತ ಭಕ್ತ ಸಂದಣಿ ಸೇರುತ್ತಿದ್ದು, ದರ್ಶನಕ್ಕೆ 8-10 ತಾಸು ಸರತಿ ಸಾಲಿನಲ್ಲಿ ನಿಂತುಹೋಗಬೇಕಿತ್ತು. ಇದರಿಂದ ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಬಹಳ ಕಷ್ಟವಾಗುತ್ತಿರುವುದನ್ನು ಮನಗಂಡು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆರಾಮದಾಯಕವಾಗಿ ದೇವರ ದರ್ಶನ ಒದಗಿಸುವ ಬಗ್ಗೆ ಸಂಕಲ್ಪ ಮಾಡಿದ್ದರು. ಅದರ ಫಲವಾಗಿ ಮಂಜುನಾಥ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ಶ್ರೀ ಸಾನಿಧ್ಯ ನಿರ್ಮಿಸಲಾಗಿದೆ.































 
 

ಏನೆಲ್ಲ ವ್ಯವಸ್ಥೆ?

*ಶ್ರೀ ಸಾನಿಧ್ಯ ಸಂಕೀರ್ಣ 2,75,177 ಚದರ ಅಡಿಯಲ್ಲಿ ನಿರ್ಮಾಣಗೊಂಡಿದೆ.
*ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ ನೀಡಲಾಗಿದೆ.
*2 ಅಂತಸ್ತಿನ ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಒಟ್ಟು 16 ವಿಶಾಲ ಭವನಗಳಿವೆ.
*ಪ್ರತಿ ಭವನದಲ್ಲಿ ಏಕಕಾಲದಲ್ಲಿ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಸಕಲ ಸೌಕರ್ಯಗಳನ್ನು ನೀಡಲಾಗಿದೆ.
*ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಸ್ಟೈನ್‌ಲೆಸ್‌ ಸ್ಟೀಲ್ ಕುರ್ಚಿಗಳಿವೆ. ಹವಾನಿಯಂತ್ರಿತ ಸೌಕರ್ಯ ಇದೆ.
*ಭಕ್ತರ ಸಂಖ್ಯೆಯನ್ನು ನಿರ್ಧರಿಸಿ ಭವನದೊಳಗೆ ಕಳುಹಿಸಲು ಎಐ ತಂತ್ರಜ್ಞಾನ ಆಧಾರಿತ ಕ್ಯಾಮರಾ ಅಳವಡಿಸಲಾಗಿದೆ.
*ಭಕ್ತರಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ಭವನ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ಪ್ರಸಾರವಾಗುತ್ತಿರುತ್ತದೆ.
*ಶ್ರೀ ಸಾನಿಧ್ಯ ಸಂಕೀರ್ಣದ ಭವನಗಳ ದ್ವಾರದಲ್ಲಿ ಸೇವಾ ರಶೀದಿಯ ಕೌಂಟರ್ ಇದೆ.
*ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಇದೆ.
*ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದ 6-7 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top