ಕುತೂಹಲ ಕೆರಳಿಸಿದ ರಾಷ್ಟ್ರ ರಾಜಧಾನಿಯ ಮತ ಸಮರ
ಹೊಸದಿಲ್ಲಿ: ದೇಶ ಇನ್ನೊಂದು ಚುನಾವಣೆ ಕದನ ಕುತೂಹಲಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ 2 ಗಂಟೆಗೆ ದಿಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ರಾಷ್ಟ್ರ ರಾಜಧಾನಿಯಿರುವ ರಾಜ್ಯದ ಚುನಾವಣೆ ಆದ ಕಾರಣ ದಿಲ್ಲಿ ಸಮರ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಕುತೂಹಲ ಕೆರಳಿಸಿದೆ.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಸಬೇಕಿದೆ. ಈಗಾಗಲೇ ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ ಎಲ್ಲ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೊಸದಿಲ್ಲಿ ಕ್ಷೇತ್ರದಿಂದ ಹಾಗೂ ಹಾಲಿ ಮುಖ್ಯಮಂತ್ರಿ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಚುನಾವಣೆಯ ದಿನಾಂಕ ಪ್ರಕಟವಾಗುವ ಮೊದಲೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಸಜ್ಜಾಗಿವೆ. ಕಾಂಗ್ರೆಸ್ ಸಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಸಮರ ಎದುರಿಸಲು ತಯಾರಾಗಿದೆ. ಬಿಜೆಪಿ ಮತ್ತು ಆಪ್ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನೂ ಪೂರ್ಣಗೊಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ ಕೇಂಜ್ರಿವಾಲ್ ತಮ್ಮ ಪಕ್ಷಗಳ ಪ್ರಚಾರದ ಸಾರಥ್ಯ ವಹಿಸಿಕೊಂಡಿದ್ದಾರೆ. ಆಡಳಿತಾರೂಢ ಆಪ್‌ನ ಭದ್ರಕೋಟೆ ಎಂದು ಪರಿಗಣಿಸಲಾದ ನಗರಗಳಲ್ಲಿ ನೆಲೆಯೂರಲು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಯತ್ನಸುತ್ತಿದೆ.
ಬಿಜೆಪಿ 1998ರಿಂದ ದಿಲ್ಲಿಯಲ್ಲಿ ಅಧಿಕಾರದಿಂದ ಹೊರಗುಳಿದಿದ್ದು, 2015ರಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಹೊಂದಿರುವ ಎಎಪಿಯನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಎಎಪಿ 2015 ಮತ್ತು 2020ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿತ್ತು.