ಮಾರುತಿ ಕಂಪನಿಯ 40 ವರ್ಷಗಳ ಪಾರಮ್ಯ ಬ್ರೇಕ್
ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಕಾರುಗಳು ಹೊಸ ಕ್ರಾಂತಿಯನ್ನು ಮಾಡಿವೆ. ಮಾರುತಿ ಸುಝುಕಿ ಕಂಪನಿಯ 40 ವರ್ಷಗಳ ದಾಖಲೆಯನ್ನು ಮುರಿದು ಟಾಟಾ ಕಾರುಗಳು ಮಾರಾಟದಲ್ಲಿ ವಿಕ್ರಮ ಸಾಧಿಸಿವೆ. ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನು ಟಾಟಾ ಕಾರುಗಳು ಸಾಬೀತುಪಡಿಸಿವೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮಾರುತಿ ಸುಝುಕಿ ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್ ಹಿಂದಿಕ್ಕಿದೆ.
ಇಲ್ಲಿಯವರೆಗೆ ದೇಶದಲ್ಲಿ ವರ್ಷವೊಂದರಲ್ಲಿ ಮಾರುತಿ ಕಂಪನಿಯ ಕಾರುಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ 2024ರಲ್ಲಿ ಟಾಟಾ ಕಂಪನಿಯ ಪಂಚ್ ಕಾರು ಅತಿಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್ ಮಾಡಿದೆ.
ಆಟೋಕಾರ್ ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಮೋಡೆಲನ್ನು ಹಿಂದಿಕ್ಕಿದೆ. ವ್ಯಾಗನ್ ಆರ್ 1,90,855 ಮಾರಾಟವಾದರೆ ಟಾಟಾ ಪಂಚ್ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಮಾರಾಟದಲ್ಲಿ ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದಿದ್ದರೂ ಟಾಪ್-5ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.