ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಶ್ರೀರಾಮ ಭಜನಾ ತಂಡದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಭಜನ ಕೀರ್ತನ ಸಂಭ್ರಮ, ಭಕ್ತಿ-ಭಾವ-ಕುಣಿತದ ಸಮ್ಮಿಲನ ಭಾನುವಾರ ಸಂಜೆ ಆನಡ್ಕದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಜೆ 6.30 ಕ್ಕೆ ಬೀಟಿಕಾಡುವಿನಿಂದ ಆನಡ್ಕದ ವರೆಗೆ ವೈಭವದ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಬನ್ನೂರು ಶನೀಶ್ವರ ಭಜನಾ ತಂಡ, ಕೈಕಾರ ಶ್ರೀ ವಿದ್ಯಾನಿಧಿ ಸರಸ್ವತಿ ಭಜನಾ ತಂಡ, ಸರ್ವೆ ಶ್ರೀ ಸುಬ್ರಾಯ ಭಜನಾ ತಂಡ ಪಾಲ್ಗೊಂಡಿದ್ದು, ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳಂ ನಿಂದ ಚೆಂಡೆ ಪ್ರದರ್ಶನಗೊಂಡಿತು. ಬಳಿಕ ಕುಣಿತ ಭಜನೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಬೆತ್ತೋಡಿ ಮಾತನಾಡಿ, ದೇವರು ಮತ್ತು ನಮ್ಮ ನಡುವಿನ ಮಾಧ್ಯಮ ನಮ್ಮ ಆಚರಣೆಗಳು. ಸನಾತನ, ಪುರಾತನ ಹಿಂದೂ ಧರ್ಮದಲ್ಲಿ ಹೋಮ, ಹವನಾದಿ ಆಚರಣೆಗಳು ಒಂದೆಡೆ ಇದ್ದರೆ, ಭಜನೆ ಇನ್ನೊಂದು ರೀತಿಯ ಆಚರಣೆ. ಹಿಂದೆ ಕೂಡು ಕುಟುಂಬವನ್ನು ಒಟ್ಟಾಗಿ ಜೋಡಿಸುವಲ್ಲಿ ಭಜನೆ ಮಹತ್ವ ಪಡೆದಿದೆ. ಆದರೆ ಪ್ರಸ್ತುತ ಕೂಡು ಕುಟುಂಬ ತುಂಡಾಗಿ ಹೋಗಿದೆ. ಪ್ರಸ್ತುತ ನಮ್ಮ ಜೀವನ ದುಡ್ಡಿನ ಹಿಂದೆ ಹೋಗುತ್ತಿದೆ. ಜೀವನ ಮೌಲ್ಯ ಕಳೆದುಕೊಂಡಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ಪ್ರಸ್ತುತ ಧಾರ್ಮಿಕತೆಯನ್ನು ತನ್ನನ್ನು ತೊಡಗಿಸಿಕೊಳ್ಳಲು ಧಾರ್ಮಿಕ ಶಿಕ್ಷಣದ ಕೊರತೆ ಕಾರಣವಾಗಿದೆ ಎಂದ ಅವರು, ಎಲ್ಲಿ ಜಾಗಟೆ, ತಾಳ, ಶಂಖದ ಶಬ್ದ ಕೇಳುತ್ತದೋ ಅಲ್ಲಿಗೆ ದುಷ್ಟಶಕ್ತಿಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಭಜನೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಶಿಕ್ಷಣ ಬೋಧಕಿ ವಿ.ಪ್ರಭಾವತಿ, ಆನಡ್ಕ ಶ್ರೀರಾಮ ಭಜನಾ ತಂಡದ ಗೌರವ ಸಲಹೆಗಾರ ದಿನೇಶ್ ಗೌಡ ಮಜಲು ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಆನಡ್ಕ ಶ್ರೀರಾಮ ಭಜನಾ ತಂಡದ ಅಧ್ಯಕ್ಷ ಗುರುಪ್ರಸಾದ್ ವಾಲ್ತಾಜೆ ವಹಿಸಿದ್ದರು. ವೇದಿಕೆಯಲ್ಲಿ ಆನಡ್ಕ ಶ್ರೀರಾಮ ಭಜನಾ ತಂಡದ ಕುಣಿತ ಭಜನೆ ತರಬೇತುದಾರ ಕಾರ್ತಿಕ್ ಆರ್ಯಾಪು, ಭಜನೆ ತರಬೇತುದಾರೆ ಪೂರ್ಣಿಮಾ ಬಿರ್ಮನಕಜೆ ಉಪಸ್ಥಿತರಿದ್ದರು.
ರಾತ್ರಿ 9.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.