ಜ.11, 12, 13 : ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಕೃಷಿಮೇಳಕ್ಕೆ ಚಾಲನೆ

ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಬ ತಾಲೂಕಿನ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕೃಷಿ ಮೇಳದ ಉದ್ಘಾಟನಾ ಸಮಾರಂಭ ಜ.11, 12 ಹಾಗೂ 13 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್‍. ಉದನಡ್ಕ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ದ.ಕ.ಜಿಲ್ಲೆಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಚಾರ್ವಾಕ ಭಾಗದ ಅನೇಕ ಹಿರಿಯರು ಸೇರಿಕೊಂಡು ಉಪ್ಪಿನಂಗಡಿ ತಾಲೂಕು ಕೇಂದ್ರ ಆಗಿದ್ದ ಸಂದರ್ಭದಲ್ಲಿ ಚಾರ್ವಾಕ ಗ್ರಾಮದಲ್ಲಿ ಸ್ಥಾಪನೆ ಮಾಡಲಾಯಿತು. ಇದೀಗ ಶತಮಾನೋತ್ಸವದ ಅಂಗವಾಗಿ ಸ್ಥಳೀಯ 4.30 ಸೆಂಟ್ಸ್ ಜಾಗವನ್ನು ಖರೀದಿ ಮಾಡಿ ಒಟ್ಟು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಜ.11 ಶನಿವಾರ ಕಾಣಿಯೂರು ರಾಮತೀರ್ಥಮಠ ಜಾತ್ರಾ ಮೈದಾನದಲ್ಲಿ ನಡೆಯುವ ಕೃಷಿಮೇಳಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ಚಾಲನೆ ನೀಡಲಿದ್ದು, ಸಂಘದ ಅಧ್ಯಕ್ಷ ಗಣೇಶ್‍ ಕೆ.ಎಸ್‍.ಉದನಡ್ಕ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ನಿರ್ದೇಶಕ ಎಸ್‍.ಆರ್‍.ಸತೀಶ್ಚಂದ್ರ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕ ಮನ್ಮಥ ಎಸ್‍.ಎನ್‍., ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್‍ ಕುಮಾರ್, ಚಾರ್ವಾಕ ಸಿ.ಎ.ಬ್ಯಾಂಕ್‍ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಶ್ರೀ ಕಾಣಿಯೂರು ಮಠದ ವ್ಯವಸ್ಥಾಪಕ ಶ್ರೀನಿಧಿ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಸವಣೂರು ಸಿ.ಎ. ಬ್ಯಾಂಕ್‍ ಅಧ್ಯಕ್ಷ ತಾರನಾಥ ಕಾಯರ್ಗ, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಚಾರ್ವಾಕ ಹಾಲುತ್ಪಾದಕರ ಸಂಘದ ನಿಕಟಪೂರ್ವ ಅಧ್ಯಕ್ಷ ಧನಂಜಯ ಕೇಕನಾಜೆ, ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕಾಣಿಯೂರು ಸಿ.ಎ.ಬ್ಯಾಂಕ್‍ ಮಾಜಿ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು, ಚಾರ್ವಾಕ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‍ ಆರ್‍.ಗೌಡ ಅರುವಗುತ್ತು, ಶ್ರೀ ಕಾಣಿಯೂರು ಮಠದ ನಿಕಟಪೂರ್ವ ವ್ಯವಸ್ಥಾಪಕ ನಿರಂಜನ್ ಆಚಾರ್‍ ಕೆನ್ನಾರು, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಅಧ್ಯಕ್ಷ ಮಹೇಶ್‍ ಕೆ. ಸವಣೂರು, ನ್ಯಾಯವಾರಿ ಶಿವಪ್ರಸಾದ್‍ ಇ., ಕಾಣಿಯೂರು ಶ್ರೀ ಶಿರಾಡಿ ರಾಜನ್‍ ದೈವಸ್ಥಾನದ ಆಡಳಿತ ಮೊಕ್ತೇಸರ ರೋಹಿತ್ ಗೌಡ ಅನಿಲ ಪಾಲ್ಗೊಳ್ಳುವರು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಬಳಿಕ 3 ರಿಂದ ಅಡಿಕೆ, ತೆಂಗು, ಮಿಶ್ರ ಬೆಳೆ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಅವರು ತಿಳಿಸಿದರು.































 
 

ಜ.12 ರಂದು ಸ್ವ ಉದ್ಯೋಗ ಕುರಿತು ವಿಚಾರಗೋಷ್ಠಿ ಬೆಳಗ್ಗೆ 11.30 ರಿಂದ ನಡೆಯಲಿದೆ. ಸಂಜೆ 6 ಗಂಟೆಗೆ ಉಡುಪಿ ಕಾಪು ರಂಗ ತರಂಗ ಕಲಾವಿದರಿಂದ ‘ಕುಟ್ಟಣ್ಣನ ಕುಟುಂಬ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಜ.13 ಸೋಮವಾರ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೂತಕ ಕಚೇರಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ಅಧ್ಯಕ್ಷ, ಸಹಕಾರಿ ರತ್ನ ಎಂ.ಎನ್‍.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಗಣೇಶ್‍ ಕೆ.ಎಸ್‍. ಉದನಡ್ಕ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೂತನ ಗೋದಾಮು ಕಟ್ಟಡ ಉದ್ಘಾಟಿಸುವರು. ಮಂಗಳೂರು ಸಂಸದ ಕ್ಯಾ.ಬ್ರಿಜೇಶ್‍ ಚೌಟ ದೀಪ ಬೆಳಗಿಸುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸದಸ್ಯರಿಗೆ ಎಸ್‍.ಎಂ.ಎಸ್‍. ಮೂಲಕ ಮಾಹಿತಿಗೆ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಂಪರ್ಕ ನೂತನ ರಸ್ತೆ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್‍.ಅಂಗಾರ, ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕರಾದ ಎಸ್‍.ಬಿ.ಜಯರಾಮ ರೈ, ಶಶಿಕುಮಾರ್  ರೈ ಬಾಲ್ಯೊಟ್ಟು, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್‍ ಹೆಚ್‍.ಎನ್‍., ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕಾಣಿಯೂರು ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ ಪಾಲ್ಗೊಳ್ಳುವರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಸ್ಥಾಪಕ ಸದಸ್ಯರುಗಳಿಗೆ, ಸ್ಥಳ ದಾನಿಗಳಿಗೆ, ಮಾಜಿ ಅಧ್ಯಕ್ಷರುಗಳಿಗೆ, ನಿವೃತ್ತ ಸಿಬ್ಬಂದಿಗಳಿಗೆ, ರಾಷ್ಟ್ರಮಟ್ಟದ ಸಾಧಕರುಗಳಿಗೆ ಗೌರವಾರ್ಪಣೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್‍ ಬೈಲಂಗಡಿ, ವಿಶ್ವನಾಥ ಕೂಡಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ. ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top